ವರದಿಗಾರ (ಸೆ.17): ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ಸೆಪ್ಟೆಂಬರ್ 17 ರ ಗುರುವಾರ ಯುವಕರು ‘ರಾಷ್ಟ್ರೀಯ ನಿರುದ್ಯೋಗ ದಿನವನ್ನು’ ಆಚರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಭಾರೀ ನಿರುದ್ಯೋಗವು ಯುವಕರನ್ನು ಇಂದು #NationalUnemploymentDay ಎಂದು ಆಚರಿಸುವಂತೆ ಮಾಡಿದೆ. ಉದ್ಯೋಗವು ಒಂದು ಘನತೆಯ ಪ್ರತೀಕವಾಗಿದೆ. ಸರ್ಕಾರ ಎಷ್ಟು ದಿನ ಅದನ್ನು ನಿರಾಕರಿಸುತ್ತದೆ? ಎಂದು ಕುಟುಕಿದ್ದಾರೆ.
ಸೆಪ್ಟೆಂಬರ್ 17 ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾಗಿದೆ. ಇದಕ್ಕೂ ಮುನ್ನ ಮತ್ತೊಂದು ಟ್ವೀಟ್ ನಲ್ಲಿ, ರಾಹುಲ್ ಗಾಂಧಿ, 70 ವರ್ಷ ತುಂಬಿದ ಪ್ರಧಾನ ಮಂತ್ರಿಗೆ ಗುರುವಾರ ಶುಭಾಶಯಗಳನ್ನು ತಿಳಿಸಿದ್ದರು.
ನಿರುದ್ಯೋಗ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿರುವ ರಾಹುಲ್ ಗಾಂಧಿ, 1 ಕೋಟಿ ಭಾರತೀಯರು ಹೇಗೆ ಉದ್ಯೋಗ ಅರಸುತ್ತಿದ್ದಾರೆ. ಆದರೆ ರಾಜ್ಯಗಳಲ್ಲಿ ಕೇವಲ 1.77 ಲಕ್ಷ ಉದ್ಯೋಗಗಳು ಮಾತ್ರ ಲಭ್ಯವಿವೆ ಎಂಬ ಹಿಂದಿ ಪತ್ರಿಕೆಯಲ್ಲಿ ಬಂದ ಸುದ್ದಿಯ ವರದಿಯೊಂದನ್ನು ಟ್ಯಾಗ್ ಮಾಡಿದ್ದಾರೆ.
ನಿರುದ್ಯೋಗ, ಕೊರೊನಾ ವೈರಸ್ ಬಿಕ್ಕಟ್ಟ ನಿಯಂತ್ರಣದಲ್ಲಿ ವಿಫಲ, ಭಾರತ ಮತ್ತು ಚೀನಾ ನಡುವಿನ ಬಿಕ್ಕಟ್ಟು ಸೇರಿದಂತೆ ಹಲವು ವಿಷಯಗಳ ಕುರಿತು ರಾಹುಲ್ ಗಾಂಧಿ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
