ರಾಷ್ಟ್ರೀಯ ಸುದ್ದಿ

ಬೇಯಿಸಿದ ಬೀಫ್ ಮಾರಾಟ ಮಾಡಿದ ಆರೋಪದಲ್ಲಿ ಹಲ್ಲೆ: ಸಂತ್ರಸ್ತನಿಗೆ 1 ಲಕ್ಷ ರೂ.ಪರಿಹಾರ ನೀಡುವಂತೆ ಮಾನವ ಹಕ್ಕು ಆಯೋಗದಿಂದ ಅಸ್ಸಾಂ ಸರ್ಕಾರಕ್ಕೆ ಆದೇಶ

ವರದಿಗಾರ (ಸೆ.17): ವಾರಕ್ಕೊಮ್ಮೆ ನಡೆಯುವ ಮಾರುಕಟ್ಟೆಯಲ್ಲಿ ತನ್ನ ಚಹಾ ಅಂಗಡಿಯಲ್ಲಿ ಬೇಯಿಸಿದ ಬೀಫ್ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಅಸ್ಸಾಂನ ಬಿಸ್ವನಾಥ್ ಜಿಲ್ಲೆಯಲ್ಲಿ 48 ವರ್ಷದ ಶೌಕತ್ ಅಲಿ ಎಂಬವರ ಮೇಲೆ ಒಂದು ವರ್ಷದ ಹಿಂದೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತನಿಗೆ ಒಂದು ಲಕ್ಷ ರೂ.ಪರಿಹಾರ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ-ಎನ್ ಎಚ್ಆರ್ ಸಿ ಅಸ್ಸಾಂ ಸರ್ಕಾರಕ್ಕೆ ಆದೇಶಿಸಿದೆ.

ಘಟನೆ ನಡೆದ ಐದು ದಿನಗಳ ನಂತರ 2019 ರ ಏಪ್ರಿಲ್ 12 ರಂದು 126 ಸದಸ್ಯ ಬಲದ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ, ಕಾಂಗ್ರೆಸ್ ಶಾಸಕ ದೇಬಾಬ್ರತಾ ಸೈಕಿಯಾ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಆದೇಶ ಹೊರಡಿಸಲಾಗಿದೆ.

ಸೆಪ್ಟೆಂಬರ್ 16 ರಂದು ಎನ್‌ಎಚ್‌ಆರ್‌ಸಿ ಆದೇಶ ನೀಡಿದ್ದು, ಅದರಲ್ಲಿ ಆಯೋಗದ ಶೋಕಾಶ್ ನೋಟಿಸ್ ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಉತ್ತರಿಸಿಲ್ಲ, ಮಾತ್ರವಲ್ಲ ಅಸ್ಸಾಂ ಪೊಲೀಸ್ ಮಹಾನಿರ್ದೇಶಕರು ಕೂಡ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡ ವರದಿಯನ್ನು ಸಲ್ಲಿಸಿಲ್ಲ ಎಂದು ತಿಳಿಸಲಾಗಿದೆ.

ಏಪ್ರಿಲ್ 7, 2019 ರಂದು ಬಿಸ್ವನಾಥ್ ಚರಿಯಾಲಿ ಪಟ್ಟಣದ ಮಧುಪುರದ ವಾರದ ಸಂತೆಯಲ್ಲಿ ಗೋಮಾಂಸ ಮಾರಾಟ ಮಾಡಿದ್ದಕ್ಕಾಗಿ ಗುಂಪೊಂದು ಶೌಕತ್ ಅಲಿ ಅವರನ್ನು ಥಳಿಸಿತ್ತು. ಮಾತ್ರವಲ್ಲ ಪೊಲೀಸರ ಸಮ್ಮುಖದಲ್ಲೇ ಅಲಿ ಅವರಿಗೆ ಹಂದಿಮಾಂಸ ತಿನ್ನಲು ಒತ್ತಾಯಿಸಿತ್ತು. ಅಲ್ಲದೆ, ಸ್ಥಳೀಯ ಬಿಜೆಪಿ ಮುಖಂಡರನ್ನು ಒಳಗೊಂಡ ಈ ಗುಂಪು, ಅಲಿ ಅವರಿಗೆ ಮಾಂಸವನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಮಾರುಕಟ್ಟೆಯ ಗುತ್ತಿಗೆದಾರನ ಮೇಲೂ ಹಲ್ಲೆ ನಡೆಸಿತ್ತು.

ಅಸ್ಸಾಂನಲ್ಲಿ ಗೋಮಾಂಸ ಸೇವನೆ ಕಾನೂನುಬದ್ಧವಾಗಿದೆ. ಆದರೆ ಪಶುವೈದ್ಯ ಅಧಿಕಾರಿಯು ವಧಿಸಲ್ಪಡುವ ಪ್ರಾಣಿ 14 ವರ್ಷಕ್ಕಿಂತ ಮೇಲ್ಪಟ್ಟದ್ದು ಎಂಬುದನ್ನು ಪ್ರಮಾಣೀಕರಿಸಿದರೆ ಮಾತ್ರ ಅವುಗಳನ್ನು ಕೊಲ್ಲಬಹುದು ಎಂಬ ನಿಯಮವಿದೆ. ಇದನ್ನು ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ 1950 ರ ಪ್ರಕಾರ ಸೂಚಿಸಲಾಗಿದೆ.

ಶೊಕಾಸ್ ನೋಟಿಸ್ ಗೆ ಉತ್ತರಿಸಲು ಮುಖ್ಯ ಕಾರ್ಯದರ್ಶಿ, ಡಿಜಿಪಿ ವಿಫಲರಾಗಿದ್ದು, ಸರ್ಕಾರಕ್ಕೆ ಏನೂ ಹೇಳಲು ಇಲ್ಲ ಎಂದು ತೀರ್ಮಾನಿಸಿ ಈ ಆದೇಶ ನೀಡಲಾಗಿದೆ ಎಂದು ಎನ್ ಎಚ್ಆರ್ ಸಿ ತಿಳಿಸಿದೆ.
ಸಂತ್ರಸ್ತ ಶೌಕತ್ ಅಲಿ ಅವರಿಗೆ 1,00,000 ಪರಿಹಾರವನ್ನು ಬಿಡುಗಡೆ ಮಾಡಲು ಮತ್ತು ಆರು ವಾರಗಳಲ್ಲಿ ಆಯೋಗಕ್ಕೆ ಪಾವತಿಸಿದ ದಾಖಲೆಯನ್ನು ವರದಿ ಸಮೇತ ಸಲ್ಲಿಸುವಂತೆ ಅಸ್ಸಾಂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಎನ್‌ಎಚ್‌ಆರ್‌ಸಿಯ ಸಹಾಯಕ ರಿಜಿಸ್ಟ್ರಾರ್ (ಕಾನೂನು) ಪತ್ರ ಬರದು ಸೂಚಿಸಿದ್ದಾರೆ.

ಇದು ಸ್ಪಷ್ಟ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಸಂತ್ರಸ್ತನಿಗೆ ಪರಿಹಾರ ನೀಡುವುದು ಸರ್ಕಾರದ ಕರ್ತವ್ಯ ಎಂದು ತಿಳಿಸಿದೆ.

ಅಲಿ ಮೇಲೆ ಹಲ್ಲೆ ನಡೆಸಿದ ಬಗ್ಗೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿತ್ತು. ಸಂತ್ರಸ್ತೆಯ ಸಹೋದರ ಸಹಾಬುದ್ದೀನ್ ಅಲಿ ನೀಡಿದ ದೂರಿನ ನಂತರ ಪೊಲೀಸರು ಏಪ್ರಿಲ್ 8 ರಂದು ಪ್ರಕರಣ ದಾಖಲಿಸಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group