ವರದಿಗಾರ (ಸೆ.16): ಆರ್ಎಸ್ಎಸ್ನೊಂದಿದ್ದ ಅರವಿಂದ ಕೇಜ್ರಿವಾಲ್ ಅವರ ಸಂಬಂಧದ ಬಗ್ಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಆರೋಪವನ್ನು ರಾಹುಲ್ ಗಾಂಧಿ ಬೆಂಬಲಿಸಿದ್ದು, ಈ ವಿಷಯದ ಬಗ್ಗೆ ನಾನು ನಿಮಗೆ ಮೊದಲೇ ಹೇಳಿಲ್ಲವೇ ಎಂದು ತಿಳಿಸಿದ್ದಾರೆ.
ಪ್ರಶಾಂತ್ ಭೂಷಣ್ ಅವರು ಇತ್ತೀಚೆಗೆ ಅರವಿಂದ ಕೇಜ್ರಿವಾಲ್ ಅವರಿಗೆ ಆರ್ ಎಸ್ಎಸ್ ಸಂಪರ್ಕ ಇತ್ತು, ಭ್ರಷ್ಟಾಚಾರ ವಿರುದ್ಧ ಭಾರತ ಎಂಬ ಚಳವಳಿಯನ್ನು ಬಿಜೆಪಿ, ಆರ್ ಎಸ್ಎಸ್ ದುರುಪಯೋಗಪಡಿಸಿಕೊಂಡಿತ್ತು ಎಂದು ಹೇಳಿದ್ದರು.
ಈ ಹೇಳಿಕೆ ಬೆನ್ನಲ್ಲೇ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಐಎಸಿ ಆಂದೋಲನ ಮತ್ತು ಆಮ್ ಆದ್ಮಿ ಪಕ್ಷ ಎರಡೂ ಕೂಡ ದೇಶದಲ್ಲಿ ಪ್ರಜಾತಂತ್ರವನ್ನು ದಮನ ಮಾಡಲು ಆರೆಸ್ಸೆಸ್ ಮತ್ತು ಬಿಜೆಪಿ ಹುಟ್ಟು ಹಾಕಲಾಗಿದ್ದ ಸಂಗತಿ ನಮಗೆ ಗೊತ್ತಿತ್ತು. ಆಮ್ ಆದ್ಮಿಯ ಸಂಸ್ಥಾಪಕರೊಬ್ಬರೇ ಈಗ ಇದನ್ನು ಖಚಿತಪಡಿಸಿದ್ದಾರೆ ಎಂದು ಭೂಷನ್ ಹೇಳಿಕೆಯನ್ನು ಉಲ್ಲೇಖಿಸಿ ಹೇಳಿದ್ದಾರೆ.
ಆರ್ ಎಸ್ಎಸ್-ಬಿಜೆಪಿಯೊಂದಿಗೆ ಎಎಪಿಯ ಗೌಪ್ಯ ಸಂಬಂಧ ಬಗ್ಗೆ ಕಾಂಗ್ರೆಸ್ ಆಗಾಗ್ಗೆ ಮಾತನಾಡಿದ್ದರೂ, ಭೂಷಣ್ ಅವರ ಸ್ಪಷ್ಟ ಆರೋಪದ ಬಳಿಕ ಅದಕ್ಕೆ ಇನ್ನಷ್ಟು ವಿಶ್ವಾಸಾರ್ಹತೆ ದೊರೆತಿದೆ. ಏಕೆಂದರೆ ಅವರು ಭಾರತ ವಿರುದ್ಧ ಭ್ರಷ್ಟಾಚಾರ ಮತ್ತು ಎಎಪಿ ಎರಡರ ಸ್ಥಾಪಕ ಸದಸ್ಯರಾಗಿದ್ದರು.
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರೊಂದಿಗೆ ಭೂಷಣ್ ಕೂಡ ಚಳವಳಿಯ ಪ್ರಮುಖ ತಂಡದಲ್ಲಿದ್ದರು, ಅವರು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಸಹಾಯದಿಂದ ಲೋಕಪಾಲ್ ಅಭಿಯಾನವನ್ನು ಆರಂಭಿಸಿದ್ದರು.
“ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಮತ್ತು ಬಿಜೆಪಿಯನ್ನು ಅಧಿಕಾರಕ್ಕೆ ತರುವ ರಾಜಕೀಯ ಉದ್ದೇಶಗಳಿಗಾಗಿ” ಆಂದೋಲನವನ್ನು ಆರ್ ಎಸ್ಎಸ್-ಬಿಜೆಪಿ ದುರುಪಯೋಗಪಡಿಸಿಕೊಂಡಿತು. ಇದಕ್ಕಾಗಿ ವಿಷಾದಿಸುತ್ತೇನೆ ಎಂದು ಭೂಷಣ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.
