ವರದಿಗಾರ (ಸೆ.16): ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಒಂದು ಅಟೆನ್ಶನ್ ಡೈವರ್ಷನ್ ಸರ್ಕಾರ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯದ ಬಿಜೆಪಿ ಸರ್ಕಾರ ಒಂದು ಅಟೆನ್ಶನ್ ಡೈವರ್ಷನ್ ಸರ್ಕಾರ. ಕೊರೋನಾ ಹಾವಳಿ, ಪ್ರವಾಹ ಸಂಕಷ್ಟ, ರೈತ ವಿರೋಧಿ ಎಪಿಎಎಂಸಿ ಜನಕಾಯ್ದೆ ತಿದ್ದುಪಡಿ, ಶ್ರಮಿಕ ವಿರೋಧಿ ಕಾರ್ಮಿಕ ಕಾಯ್ದೆ ತಿದ್ದುಪಡಿಗಳ ಬಗ್ಗೆ ಚರ್ಚಿಸುವ ಬದಲು, ಡ್ರಗ್ಸ್ ಪ್ರಕರಣವನ್ನು ಸಮರ್ಪಕವಾಗಿ ತನಿಖೆ ನಡೆಸಿ ಮಾಫಿಯಾ ಮಟ್ಟ ಹಾಕಲು ನಾರ್ಕೋಟಿಕ್ ಸೆಲ್ ಹಾಗೂ ಕಾನೂನು ಇನ್ನಷ್ಠು ಬಲಿಷ್ಠಗೊಳಿಸುವ ಬದಲು ರಾಜಕೀಯ ಲಾಭಕ್ಕಾಗಿ ಹಿಟ್ ಅಂಡ್ ರನ್ ಕೇಸ್ ರೀತಿ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಡಲು ವಿಪಕ್ಷ ಮುಖಂಡರ ಮೇಲೆ ಗೂಬೆ ಕೂರಿಸಲು ಮುಂದಾಗಿದೆ. ಈ ಮೂಲಕ ಅಧಿವೇಶನ ಆರಂಭವಾಗುತ್ತಿರುವ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಟೀಕಿಸಿದ್ದಾರೆ.
