ವರದಿಗಾರ (ಸೆ.16): ಇದೇ ಜೂನ್ 15ರಂದು ಚೀನಾ ಸೈನಿಕರು ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ಘರ್ಷಣೆಗೆ ಇಳಿದು 20 ಸೈನಿಕರನ್ನು ಹತ್ಯೆ ಮಾಡಿದ ಘಟನೆ ನಡೆದ ನಾಲ್ಕೇ ದಿನದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಗಾಗಿ ಚೀನಾದ ಬೀಜಿಂಗ್ ಮೂಲದ ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಯಬಿ)ನಿಂದ 5,521 ಕೋಟಿ ರೂ.ಸಾಲ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ.
ಜುಲೈ 29ಕ್ಕೆ ಭಾರತ ಸರ್ಕಾರ ಚೀನಾದ 59 ಆಪ್ ಗಳನ್ನು ನಿಷೇಧಿಸಿತು. ಚೀನಾದ ಆರ್ಥಿಕತೆಯ ಮೇಲೆ ಇದೊಂದು ದೊಡ್ಡ ಹೊಡೆದ ಎಂದು ಭಾರತದ ಬಹುತೇಕ ಟಿವಿ ಮಾಧ್ಯಮಗಳು ಹಾಡಿ ಹೊಗಳಿದ್ದವು.
ಆದರೆ ಗಡಿಯಲ್ಲಿ ಉಂಟಾದ ಬಿಕ್ಕಟ್ಟಿನ ಸಂದರ್ಭದಲ್ಲೇ ಚೀನಾ ನಿಯಂತ್ರಿತ ಬ್ಯಾಂಕಿನಿಂದ ಭಾರತ ಒಟ್ಟು 3 1,350 ಮಿಲಿಯನ್ (9,202 ಕೋಟಿ ರೂ.) ಎರಡು ಸಾಲಗಳನ್ನು ಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ದೃಢಪಡಿಸಿದೆ.
ಎಐಐಬಿಯಿಂದ ಸಾಲ ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ, ಚೀನಾ ನಂತರ ಭಾರತವು ಈ ಬ್ಯಾಂಕಿನಲ್ಲಿ ಎರಡನೇ ಅತಿದೊಡ್ಡ ಷೇರುದಾರ ದೇಶವಾಗಿದೆ. ಭಾರತದ ಕೋವಿಡ್ ಸಾಮಾಜಿಕ ಸಂರಕ್ಷಣಾ ಪ್ರತಿಕ್ರಿಯೆ ಕಾರ್ಯಕ್ರಮವನ್ನು ವೇಗಗೊಳಿಸಲು ಈ ಸಾಲವನ್ನು ಪಡೆಯಲಾಗಿದೆ ಎಂದು ಸರ್ಕಾರ ಸಮರ್ಥನೆ ನೀಡಿದೆ.
ಸಾಲದ ವಿವರಗಳನ್ನು ಸಹಾಯಕ ಹಣಕಾಸು ಸಚಿವ ಅನುರಾಗ್ ಠಾಕೂರ್ ಅವರು ಸೋಮವಾರ ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ ಖಚಿತಪಡಿಸಿದ್ದಾರೆ.
ಬಿಜೆಪಿ ಸಂಸದರಾದ ಸುನಿಲ್ ಕುಮಾರ್ ಸಿಂಗ್ ಮತ್ತು ಪಿ.ಪಿ ಚೌಧರಿ ಅವರು ಕೇಳಿದ ಪ್ರಶ್ನೆಗಳಿಗೆ ಠಾಕೂರ್ ಲಿಖಿತ ಉತ್ತರ ನೀಡಿದ್ದು, ಕೊರೊನಾ ಸಂಕಷ್ಟ ನಿವಾರಣೆ ಸೌಲಭ್ಯದಡಿಯಲ್ಲಿ ಭಾರತ ಸರ್ಕಾರವು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ನಿಂದ ಎರಡು ಸಾಲ ಒಪ್ಪಂದಗಳಿಗೆ ಸಹಿ ಹಾಕಿದೆ. ಕೊರೊನಾ ಸೋಂಕು ನಿಯಂತ್ರಿಸಲು ಮತ್ತು ಸನ್ನದ್ಧತೆಗಾಗಿ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ‘ಇಂಡಿಯಾ ಕೋವಿಡ್ -19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳ ಪೂರ್ವಸಿದ್ಧತಾ ಯೋಜನೆಗೆ’ ಬೆಂಬಲ ನೀಡಲು 2020 ರ ಮೇ 8 ರಂದು ಮೊದಲ 500 ಮಿಲಿಯನ್ ಅಮೆರಿಕನ್ ಡಾಲರ್ ಸಾಲಕ್ಕೆ ಸಹಿ ಹಾಕಲಾಯಿತು ಎಂದು ತಿಳಿಸಿದ್ದಾರೆ.
ಇದರ ಪ್ರಯೋಜನಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ ಎಂದು ಅವರು ಹೇಳಿದರು. 500 ಮಿಲಿಯನ್ ಅಮೆರಿಕನ್ ಡಾಲರ್ ಮೊದಲ ಸಾಲದ ಪೈಕಿ 251.25 ಮಿಲಿಯನ್ ಡಾಲರ್ ಎಐಐಬಿಯಿಂದ ಈಗಾಗಲೇ ಬಂದಿದೆ ಎಂದು ಠಾಕೂರ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
