ವಿದೇಶ ಸುದ್ದಿ

ಒಂದು ಕೋಟಿ ರೂಪಾಯಿ ಮನ್ನಾ ಮಾಡಿ ಭಾರತೀಯನನ್ನು ತಾಯ್ನಾಡಿಗೆ ಕಳುಹಿಸಿದ ಯುಎಇ ಸರ್ಕಾರ

ವರದಿಗಾರ (ಸೆ.15): ಕಳೆದ 13 ವರ್ಷಗಳಿಗೂ ಅಧಿಕ ಕಾಲ ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಯುನೈಟೆಡ್ ಅರಬ್ ಎಮಿರೇಟ್ಸ್ -ಯುಎಇಯಲ್ಲಿ ನೆಲೆಸಿದ್ದ 47 ವರ್ಷದ ಭಾರತೀಯನನ್ನು ಆತ ಪಾವತಿಸಬೇಕಾಗಿದ್ದ ಅರ್ಧ ಮಿಲಿಯನ್ ದಿರ್ಹಮ್ (1,00,21,000 ರೂ) ಮನ್ನಾ ಮಾಡಿ ಆತನನ್ನು ತಾಯ್ನಾಡಿಗೆ ಕಳುಹಿಸಿಕೊಟ್ಟಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡ ತೆಲಂಗಾಣದ ವಲಸೆ ಕಾರ್ಮಿಕ ಪೊಥುಗೊಂಡ ಮೇದಿ ಎಂಬವರು ಯುಎಇಯಲ್ಲಿನ ಭಾರತೀಯ ದೂತಾವಾಸವನ್ನು ಸಂಪರ್ಕಿಸಿ ತನ್ನ ಕಷ್ಟವನ್ನು ಹೇಳಿಕೊಂಡರು. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಉದ್ಯೋಗ ಕಳೆದುಕೊಂಡ ಮೇದಿ ಅವರಿಗೆ ಯಾವುದೇ ಉದ್ಯೋಗಗಳು ಸಿಗದ ಕಾರಣ ಅವರು ನಮ್ಮ ಬಳಿಗೆ ಬಂದು ವಿಷಯ ತಿಳಿಸಿದರು ಎಂದು ಭಾರತೀಯ ದೂತಾವಾಸದ ಕಾನ್ಸುಲರ್ ಜಿತೇಂದ್ರ ನೇಗಿ ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

2007 ರಲ್ಲಿ ವಿಸಿಟ್ ವೀಸಾದಲ್ಲಿ ಗಲ್ಫ್ ಗೆ ಬಂದಿದ್ದೆ, ಆದರೆ ವೀಸಾ ಏಜೆಂಟ್ ನನಗೆ ಕೈಕೊಟ್ಟಿದ್ದಾನೆ. ಮಾತ್ರವಲ್ಲ ಪಾಸ್ ಪೋರ್ಟ್ ಕೂಡ ಏಜೆಂಟ್ ಮರಳಿಸಿಲ್ಲ ಎಂದು ಮೇದಿ ಅವರು ಭಾರತೀಯ ಕಚೇರಿಗೆ ತಿಳಿಸಿದರು.  ಮೇದಿ ಅವರ ಪೌರತ್ವವನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲದ ಕಾರಣ ಅವರಿಗೆ ಸಹಾಯ ಮಾಡುವುದು ಕೂಡ ದೂತವಾಸಕ್ಕೆ ಕಷ್ಟವಾಗಿತ್ತು.

ಆಗ ಕಾನ್ಸುಲೇಟ್ ಕಚೇರಿ, ಮೇದಿ ಅವರ ಕುಟುಂಬವನ್ನು ಪತ್ತೆಹಚ್ಚಲು ಹೈದರಾಬಾದ್ ನ ಚಾರಿಟಿ ಸಂಸ್ಥೆಯೊಂದರ ಸಹಾಯ ಕೋರಿತು. ಸಮಾಜ ಸೇವಕ ಶ್ರೀನಿವಾಸ್ ಅವರ ಬೆಂಬಲದೊಂದಿಗೆ ನಾವು ಅವರ ಹಳೆಯ ಪಡಿತರ ಚೀಟಿ ಮತ್ತು ಚುನಾವಣಾ ಗುರುತಿನ ಚೀಟಿಯ ಪ್ರತಿಗಳನ್ನು ಅವರ ಗ್ರಾಮದಿಂದ ಪಡೆದುಕೊಳ್ಳಲು ಸಾಧ್ಯವಾಯಿತು. ಅವರು ನೀಡಿದ ಕೆಲವು ವಿವರಗಳು ಹೊಂದಿಕೆಯಾಗಲಿಲ್ಲ, ಆದರೆ ಅವರು ಭಾರತೀಯರು ಎಂಬುದು ಮನದಟ್ಟಾಯಿತು ಎಂದು ಜಿತೇಂದ್ರ ನೇಗಿ ಹೇಳಿದರು.

ದೂತಾವಾಸವು ಮೇದಿಗೆ ಉಚಿತ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದ ನಂತರ, ಅಧಿಕಾರಿಗಳು ಯುಎಇ ಸರ್ಕಾರದ ವೀಸಾ ಮುಕ್ತಾಯ ವಿನಾಯಿತಿ ಯೋಜನೆಯಡಿ ಅರ್ಜಿ ಸಲ್ಲಿಸಿದರು. ಈ ವಿನಾಯಿತಿ ಯೋಜನೆಯ ಪ್ರಕಾರ, 2020ರ ಮಾರ್ಚ್ 1 ರ ಮೊದಲು ವೀಸಾ ಅವಧಿ ಮುಗಿದಿರುವ ವಲಸಿಗರು ವೀಸಾ ಬಾಕಿ ಪಾವತಿಸದೆ ನವೆಂಬರ್ 17 ರ ಮೊದಲು ದೇಶವನ್ನು ತೊರೆಯಬಹುದಿತ್ತು.

ದುಬೈನ ರೆಸಿಡೆನ್ಸಿ ಮತ್ತು ವಿದೇಶಾಂಗ ವ್ಯವಹಾರಗಳ ಮಹಾ ನಿರ್ದೇಶನಾಲಯವು ಈವರೆಗೆ ಲಕ್ಷಾಂತರ ದಿರ್ಹಮ್‌ಗಳನ್ನು ವೀಸಾ ದಂಡದಲ್ಲಿ ಮನ್ನಾ ಮಾಡಿದೆ. ಯುಎಇಯಲ್ಲಿ ಇದುವರೆಗೆ 80,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 399 ಮಂದಿ ಸಾವನ್ನಪ್ಪಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group