ವರದಿಗಾರ (ಸೆ.15): ಲಾಕ್ಡೌನ್ ಅವಧಿಯಲ್ಲಿ ಮನೆಗೆ ಮರಳುವಾಗ ಎಷ್ಟು ಮಂದಿ ವಲಸೆ ಕಾರ್ಮಿಕರು ಸಾವಿಗೀಡಾದರು ಎಂಬುದರ ಮಾಹಿತಿ ಸರ್ಕಾರದ ಬಳಿ ಇಲ್ಲ ಎಂದು ಸಂಸತ್ತಿನಲ್ಲಿ ಹೇಳಿದ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಲಾಕ್ ಡೌನ್ ಸಮಯದಲ್ಲಿ ಎಷ್ಟು ವಲಸೆ ಕಾರ್ಮಿಕರು ಸತ್ತರು ಅಥವಾ ಎಷ್ಟು ಜನರು ಕೆಲಸ ಕಳೆದುಕೊಂಡರು ಎಂದು ಮೋದಿ ಸರ್ಕಾರಕ್ಕೆ ತಿಳಿದಿಲ್ಲ” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
“ನೀವು ಲೆಕ್ಕ ಮಾಡಿಲ್ಲ ಎಂದರೆ ಯಾರೂ ಸತ್ತಿಲ್ಲ ಎಂದರ್ಥವೇ ? ಹೌದು, ಈ ಕಾರ್ಮಿಕರ ಸಾವು ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರದಿರುವುದು ದುರದೃಷ್ಟಕರ. ಕಾರ್ಮಿಕರು ಸಾಯುತ್ತಿರುವುದನ್ನು ಇಡೀ ಜಗತ್ತು ಕಂಡಿದೆ, ಆದರೆ ಮೋದಿ ಸರ್ಕಾರಕ್ಕೆ ಮಾತ್ರ ತಿಳಿದಿಲ್ಲ”ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸತ್ತ ಕಾರ್ಮಿಕರ ಲೆಕ್ಕ ಸರ್ಕಾರದ ಬಳಿ ಇಲ್ಲ, ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರು ಸೋಮವಾರ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದರು.
ಕೊರೊನಾ ಲಾಕ್ ಡೌನ್ ವೇಳೆ ದೇಶದಲ್ಲಿ ಎಷ್ಟು ಉದ್ಯೋಗ ನಷ್ಟವಾಗಿದೆ ಮತ್ತು ಎಷ್ಟು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಸರ್ಕಾರ ಲೆಕ್ಕ ಹಾಕಿಲ್ಲ ಎಂದು ಅವರು ಉತ್ತರ ನೀಡಿದ್ದರು.
ಸತ್ತವರ ಅಂಕಿ ಅಂಶ ಸರ್ಕಾರದ ಬಳಿ ಇಲ್ಲದಿರುವುದರಿಂದ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.
ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 122 ಮಿಲಿಯನ್ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇವರಲ್ಲಿ ಸುಮಾರು ಶೇಕಡಾ 75ರಷ್ಟು ಮಂದಿ ಸಣ್ಣ ವ್ಯಾಪಾರಿಗಳು ಮತ್ತು ದೈನಂದಿನ ಕೂಲಿ ಕಾರ್ಮಿಕರಾಗಿದ್ದಾರೆ.
