ರಾಷ್ಟ್ರೀಯ ಸುದ್ದಿ

ಸ್ವಾತಂತ್ರ್ಯ ಹೋರಾಟಗಾರ ರಾಘವೇಂದ್ರ ರಾವ್ ಅವರ ಅಂತ್ಯಸಂಸ್ಕಾರ ನೆರವೇರಿಸಿದ ತೆಲಂಗಾಣ ಮುಸ್ಲಿಂ ಯುವಕರು

Raghavendra Rao

ವರದಿಗಾರ (ಸೆ.14): ಸ್ವಾತಂತ್ರ್ಯ ಹೋರಾಟಗಾರ, ನಿಜಾಮರ ಆಡಳಿತದ ವಿರುದ್ಧ ತೀವ್ರ ಹೋರಾಟ ನಡೆಸಿದ್ದ ರಾಘವೇಂದ್ರ ರಾವ್ ತೆಲಂಗಾಣದ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರವನ್ನು ಮುಸ್ಲಿಂ ಯುವಕರ ತಂಡವೊಂದು ನೆರವೇರಿಸಿ ಮಾನವೀಯತೆ ಮೆರೆದಿದೆ.

ಅವರಿಗೆ 94 ವರ್ಷ ವಯಸ್ಸಾಗಿತ್ತು. ವೃದ್ದಾಪ್ಯ ಸಂಬಂಧಿ ಕಾಯಿಲೆಗಳಿಂದ ಅವರು ನಿಧನರಾಗಿದ್ದರು. ಜಗಿತಿಯಾಲ್ ನ ಫೈಝಲ್ ಅಲಿ ಮತ್ತು ಅವರ ತಂಡ ಹಿಂದೂ ಸಂಪ್ರದಾಯ ಮತ್ತು ವಿಧಿವಿಧಾನಗಳಂತೆ ರಾವ್ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೆರವೇರಿಸಿದೆ.

1927ರಲ್ಲಿ ಮಲಯಾಳ ಮಂಡಳದ ಮನಲಾದಲ್ಲಿ ಜನಿಸಿದ್ದ ರಾಘವೇಂದ್ರ ರಾವ್ ಅವರು ಜಗಿತಿಯಾಲ್ ನಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದರು. ಬಹಳ ಸ್ವಾಭಿಮಾನಿಯಾಗಿದ್ದ ಅವರು ತೆಲಂಗಾಣದಲ್ಲಿ ನಿಜಾಮರ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದರು. ಮಾತ್ರವಲ್ಲ ತಮ್ಮ ಸ್ನೇಹಿತರಾದ ಥಾಂದ್ರ ಮೀನ ರಾವ್, ಜುವ್ವಾದಿ ರತ್ನಕಾರ್ ರಾವ್ ಮತ್ತಿತರರ ಜೊತೆ ಸೇರಿ ನಿಜಾಮರ ವಿರುದ್ಧ ಹೋರಾಟ ನಡೆಸಿದರು. 1947, ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗ, ನಿಜಾಮ, ತೆಲಂಗಾಣದಲ್ಲಿ ಕರ್ಫ್ಯೂ ಹೇರಿ, ರಾಜ್ಯದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸದಂತೆ ನಿಷೇಧ ಹೇರಿದ್ದರು.
ನಿಜಾಮನ ಆದೇಶವನ್ನು ಉಲ್ಲಂಘಿಸಿ ರಾಘವೇಂದ್ರ ರಾವ್ ಜಗಿತಿಯಾಲ್ ಹಳೆಯ ಪ್ರೌಢ ಶಾಲೆಯ ಮೇಲ್ಭಾಗದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ರಜಾಕಾರರು ಮತ್ತು ನಿಜಾಮ್ ಪೊಲೀಸರು ಸಾರ್ವಜನಿಕರ ಮೇಲೆ ನಡೆಸುತ್ತಿದ್ದ ದಾಳಿಯನ್ನು ವಿರೋಧಿಸಿ, ರಾವ್ ತಮ್ಮ ಸ್ನೇಹಿತರೊಂದಿಗೆ ಅವರ ವಿರುದ್ಧ ಪ್ರತಿಭಟನೆ ನಡೆಸಿದರು. ಮಾತ್ರವಲ್ಲ ಮನಾಲಾದಲ್ಲಿ ನಿಜಾಮ್ ಸರ್ಕಾರದ ಕಂದಾಯ ದಾಖಲೆಗಳನ್ನು ಸುಟ್ಟುಹಾಕಿದ್ದರು.
ಪೊಲೀಸರು ಅವರನ್ನು ಬೇಟೆಯಾಡಲು ಆರಂಭಿಸಿದರು.ಆಗ ರಾವ್ ಭೂಗತರಾಗಿ ಸಶಸ್ತ್ರ ಹೋರಾಟದಲ್ಲಿ ತರಬೇತಿ ಪಡೆದರು. ಹೈದರಾಬಾದ್ ರಾಜ್ಯವನ್ನು ಭಾರತ ಸರ್ಕಾರದೊಂದಿಗೆ ವಿಲೀನಗೊಳಿಸಿದ ನಂತರ ರಾವ್ ಅವರು ಸಾಮಾನ್ಯ ಕೃಷಿಕರಾಗಿ ಜೀವನ ನಡೆಸಿದರು. ಪದ್ಮನಾಯಕ ಕಲ್ಯಾಣ ಮಂಟಪವನ್ನು ಸ್ಥಾಪಿಸಿದ ರಾಘವೇಂದ್ರ ರಾವ್, ವೇಲಮ ಸಂಕ್ಷೇಮ ಮಂಡಲಿಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಸಂಘದ ಜಿಲ್ಲಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ತಮ್ಮ ರೈತ ಬಂಧು ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಿದ ಅವರು, ಈ ಹಣವನ್ನು ಬಡ ರೈತರಿಗೆ ನೀಡುವಂತೆ ಅವರು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಸಲಹೆ ನೀಡಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group