ರಾಜ್ಯ ಸುದ್ದಿ

ಯಾವುದೇ ಅಕ್ರಮ ಚಟುವಟಿಕೆ ನಡೆದಾಗ ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದು ಬಿಜೆಪಿಗೆ ಫ್ಯಾಷನ್ ಆಗಿದೆ: ಬಿ.ಕೆ.ಹರಿಪ್ರಸಾದ್

ವರದಿಗಾರ (ಸೆ.13): ಯಾವುದೇ ಅಕ್ರಮ ಚಟುವಟಿಕೆ ನಡೆದಾಗ ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದು ಬಿಜೆಪಿಗೆ ಒಂದು ಫ್ಯಾಷನ್ ಆಗಿ ಮಾರ್ಪಟ್ಟಿದೆ. ಕಲಬುರಗಿಯಲ್ಲಿ ಒಂದು ಸಾವಿರ ಕೆಜಿ ಗಾಂಜಾವನ್ನು ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಬಂಧಿತ ವ್ಯಕ್ತಿ ಯಾವ ಪಕ್ಷಕ್ಕೆ ಸೇರಿದವನು ? ಅವನು ಯಾವ ಸಮುದಾಯಕ್ಕೆ ಸೇರಿದವನು? ಜನರು ಅವನ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಎಂದು ಕಾಂಗ್ರೆಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ಬೆಳಗಾವಿಯ ಕಾಂಗ್ರೆಸ್ ಕಚೇರಿಗೆ ಇಂದು ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸೇವಾ ದಳ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು. ಆದರೆ ಇದು ಆರ್ ಎಸ್ಎಸ್ ಕಾರ್ಯಕರ್ತರಿಗೆ ನೀಡುವ ತರಬೇತಿಯಂತಲ್ಲ. ಸೇವಾ ದಳ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಪಕ್ಷದ ಕಾರ್ಯಕರ್ತರಿಗೆ ದೇಶದ ಅಭಿವೃದ್ಧಿಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಕಲಿಸಲಾಗುತ್ತದೆ. ಆರ್ ಎಸ್ಎಸ್ ನಂತೆ ಶತ್ರುಗಳನ್ನು ತಯಾರು ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಸಿದ್ದಾಂತವಿದೆ. ಕಾಂಗ್ರೆಸ್ ಕಾರ್ಯಕರ್ತರು ಲಾಠಿ ಹಿಡಿದರೆ ಅದರಿಂದ ಇನ್ನೊಬ್ಬರಿಗೆ ಹಾನಿಯಾಗಲಾರದು, ಬದಲಾಗಿ ಸಹಾಯವಾಗಲಿದೆ. ಆದರೆ ಆರ್ ಎಸ್ ಎಸ್ ಲಾಠಿ ಏನೆಲ್ಲಾ ಮಾಡಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿರುವ ಸಂಗತಿ ಎಂದು ಟೀಕಾಪ್ರಹಾರ ನಡೆಸಿದರು.

ಕೇಂದ್ರದಲ್ಲಿ ಬಿಜೆಪಿಯ ವೈಫಲ್ಯಗಳನ್ನು ಮುಚ್ಚಿಹಾಕಲು ರಿಯಾ ಚಕ್ರವರ್ತಿ, ಕಂಗನಾ ರಾಣಾವತ್ ಹೆಸರನ್ನು ಹರಿಯಬಿಡಲಾಗಿದೆ. ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರ ಹೆಸರನ್ನು ರಾಜ್ಯ ಬಿಜೆಪಿ ನಾಯಕರು ಜನರ ಗಮನ ಬೇರೆಡೆ ಸೆಳೆಯಲು ಹರಿಯಬಿಟ್ಟಿದ್ದಾರೆ. ಬಿಜೆಪಿ ಸರ್ಕಾರ ಈವರೆಗೆ ಮಾದಕ ವಸ್ತು ಪ್ರಕರಣಗಳಲ್ಲಿ ಮಹಿಳೆಯರ ಹೆಸರನ್ನು ಮಾತ್ರ ಬಿಡುಗಡೆ ಮಾಡಿದೆ. ಪುರುಷರು ಅಫೀಮು, ಡ್ರಗ್ಸ್ ಅಥವಾ ಗಾಂಜಾ ಸೇವಿಸುವುದಿಲ್ಲ ಎಂದು ಇದರ ಅರ್ಥವೇ?. ಇದರ ಹಿಂದೆ ಇರುವವರ ಹೆಸರನ್ನು ನಾನು ಹೇಳುವುದಿಲ್ಲ. ಆದರೆ ಬಿಜೆಪಿ ಮುಖಂಡರು ಮಾದಕವಸ್ತು ಪ್ರಕರಣದಲ್ಲಿ ಸೆಲೆಬ್ರಿಟಿಗಳ ಹೆಸರನ್ನು ಕೊರೊನಾ ನಿಯಂತ್ರಿಸುವಲ್ಲಿ ಅವರ ವೈಫಲ್ಯಗಳನ್ನು ಮುಚ್ಚಿಹಾಕಲು ಬಳಸುತ್ತಿದ್ದಾರೆ ಎಂದು ಹರಿಪ್ರಸಾದ್ ಟೀಕಿಸಿದರು.

ಬಿಜೆಪಿ ತನ್ನ ಸಂವಿಧಾನ ಎಂದು ನಂಬುವ ಪುಸ್ತಕದಲ್ಲಿ ಅಲ್ಪಸಂಖ್ಯಾತರು ‘ರಾಷ್ಟ್ರ ವಿರೋಧಿಗಳು’ ಮತ್ತು ‘ಕಮ್ಯುನಿಸ್ಟರು’ ಆಗಿರುತ್ತಾರೆ ಎಂದು ಹೇಳಿದೆ. 1923ರಿಂದಲೂ ಫ್ಯಾಶಿಸ್ಟ್ ಸಿದ್ಧಾಂತವನ್ನು ಕಾಂಗ್ರೆಸ್ ಎದುರಿಸುತ್ತಾ ಬಂದಿದೆ ಎಂದು ಅವರು ಹೇಳಿದರು.

“ನಾನು ದೇಶಾದ್ಯಂತ ಕೆಲಸ ಮಾಡಿದ್ದೇನೆ ಮತ್ತು ಬಿಜೆಪಿಯ ದೊಡ್ಡ ನಾಯಕರು ಅಫೀಮು ಸೇವಿಸುತ್ತಿರುವುದನ್ನು ನಾನು ಕಂಡಿದ್ದೇನೆ. ನನಗೆ ಎಲ್ಲವೂ ತಿಳಿದಿದೆ ಆದರೆ ಅವರ ಹೆಸರನ್ನು ಹೇಳುವುದಿಲ್ಲ. ಆದ್ದರಿಂದ, ಒಂದು ಸಮುದಾಯದ ಮುಖಂಡರನ್ನು ಗುರಿಯಾಗಿಸುವುದು ಒಳ್ಳೆಯದಲ್ಲ. ತಪ್ಪು ಮಾಡಿದ್ದರೆ ಯಾರೇ ಆದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group