ರಾಜ್ಯ ಸುದ್ದಿ

ಒಂದು ಟನ್ ಗಾಂಜಾದೊಂದಿಗೆ ಬಂಧಿತನಾದ ಚಂದ್ರಕಾಂತ್ ಚೌಹಾಣ್ ಬಿಜೆಪಿ ಕಾರ್ಯಕರ್ತ!

Chandrakanth Chouhan

ಉಪ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ ಫೋಟೋ ವೈರಲ್

ವರದಿಗಾರ (ಸೆ.13): ಡ್ರಗ್ಸ್ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ದಂಧೆಯ ಉರುಳು ಬಿಜೆಪಿ ಕಾಲಿಗೆ ಸುತ್ತಿಕೊಳ್ಳುತ್ತಲೇ ಇದೆ. ಬಂಧಿತ ನಟಿ ರಾಗಿಣಿಗೆ ಬಿಜೆಪಿಯೊಂದಿಗೆ ಸಂಬಂಧ ಬಹಿರಂಗೊಂಡ ಬೆನ್ನಲ್ಲೇ 1200 ಕೆ.ಜಿ.ಗಾಂಜಾದೊಂದಿಗೆ ಬಂಧನಕ್ಕೊಳಗಾಗಿರುವ ಮತ್ತೋರ್ವ ಪ್ರಮುಖ ಆರೋಪಿ ಚಂದ್ರಕಾಂತ್ ಚೌಹಾಣ್ ಕೂಡ ಬಿಜೆಪಿ ಕಾರ್ಯಕರ್ತ ಎಂಬುದು ಬೆಳಕಿಗೆ ಬಂದಿದೆ.

ಇತ್ತೀಚೆಗೆ ಬೆಂಗಳೂರು ಪೊಲೀಸರು ಕಲಬುರಗಿಯಲ್ಲಿ ಕುರಿ ಸಾಕಾಣಿಕೆ ಕೇಂದ್ರಕ್ಕೆ ದಾಳಿ ನಡೆಸಿ ವಶಪಡಿಸಿಕೊಂಡ 1200 ಕಿ.ಲೋ.ಗಾಂಜಾ ಪ್ರಕರಣದ ರೂವಾರಿ ಚಂದ್ರಕಾಂತ್ ಚೌಹಾಣ್ (34) ಬಿಜೆಪಿ ಕಾರ್ಯಕರ್ತ ಎಂಬುದು ಬಹಿರಂಗವಾಗಿದೆ. ಚುನಾವಣಾ ಪ್ರಚಾರದ ವೇಳೆ ತೆಗೆದ ಸೆಲ್ಫಿಯೊಂದು ಈಗ ವೈರಲ್ ಆಗಿದ್ದು, ಬಿಜೆಪಿಯೊಂದಿಗಿನ ಆತನ ಸಂಪರ್ಕ ಜಗಜ್ಜಾಹೀರಾಗಿದೆ.

ಕಲಬುರಗಿ ಜಿಲ್ಲೆಯ ಕಲಗಿ ತಾಲ್ಲೂಕಿನ ಲಚ್ಚಾ ನಾಯಕ ತಾಂಡಾ (ಕುಗ್ರಾಮ)ದ ನಿವಾಸಿಯಾಗಿರುವ ಚಂದ್ರಕಾಂತ್ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬಿಜೆಪಿ ಪರವಾಗಿ ಮತಯಾಚಿಸಿದ್ದ ಮತ್ತು ಕೇಸರಿ ಬಣ್ಣದ ಟೋಪಿ ಹಾಕಿಕೊಂಡು, ಪಕ್ಷದ ಚಿಹ್ನೆಯ ಶಾಲು ಹಾಕಿಕೊಂಡಿರುವುದು ಚಿತ್ರದಲ್ಲಿ ಸ್ಪಷ್ಟವಾಗಿದೆ. ಆತನ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತ ಎಂಬುದನ್ನು ಗ್ರಾಮದ ಹಲವರು ದೃಢಪಡಿಸಿದ್ದಾರೆ.

Chandrakanth Chouhan

ಕುರಿ ಸಾಕಾಣಿಯ ಶೆಡ್ ನಲ್ಲಿ ಸುರಂಗ ಕೊರೆದು ಅದರಲ್ಲಿ ಅಡಗಿಸಿಟ್ಟಿದ್ದ 1200 ಕಿ.ಲೋ ಗಾಂಜಾವನ್ನು ಇತ್ತೀಚೆಗೆ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದರು. ಈ ಕುರಿ ಶೆಡ್ ಕೂಡ ಚಂದ್ರಕಾಂತ್ ಒಡೆತನದಲ್ಲಿದೆ. ಇದು ಕೂಡ ಕಲಗಿ ಪೊಲೀಸ್ ಠಾಣೆಯ ಕೇವಲ ಒಂದು ಕಿ.ಲೋ ಮೀಟರ್ ದೂರದಲ್ಲಿದೆ ಎಂಬುದು ಅಚ್ಚರಿಯ ಸಂಗತಿ.

2019ರ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅವಿನಾಶ್ ಜಾದವ್ ಅವರ ಪರವಾಗಿ ಚಂದ್ರಕಾಂತ್ ಚೌಹಾನ್ ಬೂತ್ ಮಟ್ಟದಲ್ಲಿ ಕೆಲಸ ಮಾಡಿದ್ದಾನೆ ಎಂದು ಚಿಂಚೋಲಿ ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ವಿಷ್ಣುಕಾಂತ್ ಒಪ್ಪಿಕೊಂಡಿದ್ದಾರೆ.

“ಚಿಂಚೋಲಿ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಸಮುದಾಯದ ಅನೇಕ ಯುವಕರು ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ್ದರು. ಚಂದ್ರಕಾಂತ್ ಚೌಹಾನ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಹೊಂದಿದ್ದಾರೋ ಇಲ್ಲವೋ ನಮಗೆ ತಿಳಿದಿಲ್ಲ, ಆದರೆ ಬಿಜೆಪಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿಲ್ಲ ”ಎಂದು ವಿಷ್ಣುಕಾಂತ್ ಸಮರ್ಥಿಸಿಕೊಂಡಿದ್ದಾರೆ.

ಅದೇ ರೀತಿ ಸ್ಥಳೀಯ ಮತ್ತೊಬ್ಬ ಬಿಜೆಪಿ ಮುಖಂಡ ಗುರುರಾಜ್ ಭರತ್ನೂರ್ ಅವರು ಮೊದಲು ಚೌಹಾನ್ ಸಂಪರ್ಕವನ್ನು ನಿರಾಕರಿಸಿದರು. ಬಳಿಕ ಫೋಟೋ ತೋರಿಸಿದಾಗ, ಹೌದು ಆತ ಬಿಜೆಪಿ ಪರವಾಗಿ ಪ್ರಚಾರ ಮಾಡಿರಬಹುದು ಎಂದು ಒಪ್ಪಿಕೊಂಡಿದ್ದಾರೆ.

ಆರೋಪಿ ಚಂದ್ರಕಾಂತ್ ತಮ್ಮ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಈ ವಿಷಯವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ಕಲಬುರಗಿ ಸಂಸದ ಉಮೇಶ್ ಜಿ ಜಾದವ್ ಆರೋಪಿಸಿದ್ದಾರೆ. ಡ್ರಗ್ಸ್ ವಿಚಾರದಲ್ಲಿ ಬಂಧನಕ್ಕೊಳಗಾಗಿರುವ ಚೌಹಾನ್ ಸಣ್ಣ ಮೀನು ಎಂದು ಬಿಜೆಪಿಯ ಮಾಜಿ ಮುಖಂಡ ಸುಭಾಷ್ ರಾಥೋಡ್ ಪ್ರತಿಕ್ರಿಯಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group