ವರದಿಗಾರ (ಸೆ.12): ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕುರಿತು ಬರೆದಿದ್ದ ವ್ಯಂಗ್ಯಚಿತ್ರವನ್ನು ಫಾರ್ವರ್ಡ್ ಮಾಡಿದ ಕಾರಣಕ್ಕೆ ಶಿವಸೇನಾ ಕಾರ್ಯಕರ್ತರು ನಿವೃತ್ತ ನೌಕಾಪಡೆಯ ಅಧಿಕಾರಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಶಿವಸೇನೆಯ ಮುಂಬೈನ ಪಕ್ಷದ ಕಾಂದಿವಲಿ ಘಟಕದ ಶಾಖಾ ಪ್ರಮುಖ್ ಕಮಲೇಶ್ ಕದಮ್ ನೇತೃತ್ವದ ಶಿವಸೇನೆ ಕಾರ್ಯಕರ್ತರು ಈ ಹಲ್ಲೆ ನಡೆಸಿದ್ದು, ಇದರಿಂದ ಅಧಿಕಾರಿಯ ಮುಖಕ್ಕೆ ಗಾಯಗಳಾಗಿದ್ದು, ಕಣ್ಣು, ಮುಖ ಊದಿಕೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಮಲೇಶ್ ಕದಂ ಮತ್ತು ಮತ್ತೋರ್ವ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ನೌಕಾಪಡೆಯ ನಿವೃತ್ತ ಅಧಿಕಾರಿ ಮದನ್ ಶರ್ಮಾ (65) ಹಲ್ಲೆಗೊಳಗಾಗಿದ್ದಾರೆ. ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಬಳಿಕ ಅವರು ಕಾಂದಿವಲಿ ಈಸ್ಟ್ ನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.
ಬುಧವಾರ, ಪವಾರ್ ಮತ್ತು ಸೋನಿಯಾ ಗಾಂಧಿಗೆ ಠಾಕ್ರೆ ನಮಸ್ಕರಿಸುವ ರೀತಿಯಲ್ಲಿ ಚಿತ್ರಿಸಿದ್ದ ಕಾರ್ಟೂನ್ ಅನ್ನು ವಾಟ್ಸಾಪ್ ಗುಂಪಿನಲ್ಲಿ ಪೋಸ್ಟ್ ಮಾಡಲಾಗಿದೆ. ಶರ್ಮಾ ಅವರು ಕಾರ್ಟೂನ್ ಅನ್ನು ತಮ್ಮ ವಸತಿ ನಿವಾಸಿಗಳನ್ನು ಒಳಗೊಂಡ ವಾಟ್ಸಾಪ್ ಗ್ರೂಪ್ ಗೆ ರವಾನಿಸಿದ್ದಾರೆ. ಆದರೆ ಅದಕ್ಕೆ ಯಾರು ಪ್ರತಿಕ್ರಿಯಿಸಿರಲಿಲ್ಲ. ಆದರೆ ಅದನ್ನು ಯಾರೋ ಒಬ್ಬರು ಕದಮ್ ಅವರಿಗೆ ಫಾರ್ವರ್ಡ್ ಮಾಡಿದ್ದಾರೆ ಎಂದು ಶರ್ಮಾ ಅವರ ಪುತ್ರಿ, ಡಾ.ಶೀಲಾ ಶರ್ಮಾ ತಿಳಿಸಿದ್ದಾರೆ.
ಕೆಲವು ನಿಮಿಷಗಳ ಬಳಿಕ ಶರ್ಮಾ ಅವರಿಗೆ ವ್ಯಕ್ತಿಯೊಬ್ಬರು ಕರೆ ಮಾಡಿ ಅವರ ಹೆಸರು ಮತ್ತು ವಿಳಾಸ ಕೇಳಿದ್ದಾರೆ. ಇದಾದ ಅರ್ಧ ಗಂಟೆಯಲ್ಲಿ ಕದಮ್ ಮತ್ತು ಆತನ ಸಹಚರರು ಮನೆಯ ಬಳಿ ಬಂದಿದ್ದಾರೆ. ಆಗ ಅಧಿಕಾರಿ, ಈ ವ್ಯಂಗ್ಯಚಿತ್ರ ನಾನು ಬಿಡಿಸಿಲ್ಲ, ಕೇವಲ ಫಾರ್ವರ್ಡ್ ಮಾಡಿದ್ದೇನೆ ಎಂದು ಹೇಳಿದ್ದರು. ಮತ್ತೆ ರಾತ್ರಿ 12 ಗಂಟೆ ಸುಮಾರಿಗೆ 10-12 ಮಂದಿಯಿದ್ದ ತಂಡ ಬಂದ ತನ್ನ ಮೇಲೆ ಹಲ್ಲೆ ನಡೆಸಿತು ಎಂದು ಶರ್ಮಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಿಜೆಪಿಯ ಕಾಂದಿವಲಿ ಈಸ್ಟ್ ಶಾಸಕ ಅತುಲ್ ಭಟ್ಕಾಲ್ಕರ್ ಅವರು ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಮ್ತಾ ನಗರ ಪೊಲೀಸ್ ಠಾಣೆಯಲ್ಲಿ ಕದಮ್ ಮತ್ತು ಇತರ ಅಪರಿಚಿತರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಘಟನೆಯನ್ನು ಖಂಡಿಸಿದ್ದು, ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಒತ್ತಾಯಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಪೊಲೀಸರು ಆರು ಶಿವಸೇನಾ ಕಾರ್ಯಕರ್ತರನ್ನು ಬಂಧಿಸಿದ್ದರು. ಆದರೆ, ಎಲ್ಲಾ ಆರು ಆರೋಪಿಗಳಿಗೂ ಬಂಧನದ 24 ಗಂಟೆಗಳೊಳಗೆ ಜಾಮೀನು ಲಭಿಸಿದೆ.
ವಿಡಿಯೋ ವೀಕ್ಷಿಸಿ:
अभिनेत्री कंगना राणावत के कार्यालय की तोड़फोड़ करके अपनी मर्दानगी दिखाने वाले सत्ताधारी शिवसेना ने अब सत्ता के मद में एक बुजुर्ग भूतपूर्व नौसेना अधिकारी मदन शर्मा को मारपीट करते हुए उनकी आंख को जबरदस्त चोट पहुंचाई है। मुख्यमंत्री घरबैठे तानाशाही चला रहे है। pic.twitter.com/qF2NVcIN55
— Atul Bhatkhalkar (@BhatkhalkarA) September 11, 2020
