ವರದಿಗಾರ (ಸೆ.11): ಅಸ್ಸಾಂ ರಾಜ್ಯದಲ್ಲಿ ನಡೆದ ಹಿಂಸಾತ್ಮಕ ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ -ಸಿಎಎ ಪ್ರತಿಭಟನೆಯ ಸಂದರ್ಭದಲ್ಲಿ ಐವರು ಯುವರಕ ಸಾವಿನ ಕುರಿತು ಅಸ್ಸಾಂ ಲೋಕಸಭಾ ಸದಸ್ಯ ಗೌರವ್ ಗೊಗೊಯ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ (ಎನ್ಎಚ್ಆರ್ಸಿ) ಮಾಹಿತಿ ಕೋರಿದ್ದಾರೆ.
ಗೌರವ್ ಗೊಗೊಯ್ ಈ ಸಂಬಂಧ ಸೆಪ್ಟೆಂಬರ್ 9 ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಚ್.ಎಲ್. ದತ್ತು ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಗೊಗೊಯ್ ಅವರು, ಸಿಎಎ ವಿರುದ್ಧ ಡಿಸೆಂಬರ್ 2019ರಲ್ಲಿ ಅಸ್ಸಾಂ ರಾಜ್ಯಾದ್ಯಂತ ನಡೆದ ಪ್ರತಿಭಟನೆಯ ವೇಳೆ ಐವರು ನಿರಾಯುಧ ಯುವ ಪ್ರತಿಭಟನಕಾರರನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಯ ಸತ್ಯವನ್ನು ಕಂಡುಹಿಡಿಯಲು ಆಯೋಗ ಕೈಗೊಂಡ ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಶಾಲಾ ಬಾಲಕ ಸ್ಯಾಮ್ ಸ್ಟಾಫರ್ಡ್, ದೀಪಾಂಜಲ್ ದಾಸ್, ಅಬ್ದುಲ್ ಅಲೀಮ್, ಈಶ್ವರ್ ನಾಯಕ್ ಮತ್ತು ದ್ವಿಜೇಂದ್ರ ಪಾಂಗಿಂಗ್ ಎಂಬ ಐವರು ಪೊಲೀಸರ ಗೋಲಿಬಾರ್ ಗೆ ಸಾವನ್ನಪ್ಪಿದ್ದರು.
ಸಿಎಎಯು ಅಸ್ಸಾಂ ಒಪ್ಪಂದವನ್ನು ಉಲ್ಲಂಘಿಸುವ ಕಾರಣ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಯನ್ನು ದುರ್ಬಲಗೊಳಿಸಿದ್ದರಿಂದ ರಾಜ್ಯದ ಜನರು ಸಿಎಎಯನ್ನು ಒಪ್ಪುವುದಿಲ್ಲ ಎಂದು ಕಾಲಿಯಾಬಾರ್ ನ ಕಾಂಗ್ರೆಸ್ ಸಂಸದರೂ ಆಗಿರುವ ಗೊಗೋಯ್ ಹೇಳಿದ್ದಾರೆ.
ಅಲ್ಲದೆ, ಇದು ಭಾರತೀಯ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಮತ್ತು ಇದು ಸಂವಿಧಾನದ 14 ಮತ್ತು 21 ನೇ ವಿಧಿಗಳಿಗೆ ವಿರುದ್ಧವಾಗಿದೆ” ಎಂದು ಹಣಕಾಸು ಸ್ಥಾಯಿ ಸಮಿತಿಯ ಸದಸ್ಯರೂ ಆಗಿರುವ ಗೊಗೊಯ್ ಹೇಳಿದ್ದಾರೆ.
2014 ರ ಡಿಸೆಂಬರ್ 31 ರವರೆಗೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಧಾರ್ಮಿಕ ಕಿರುಕುಳದಿಂದ ಭಾರತಕ್ಕೆ ಬಂದಿರುವ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡಲು ಕೇಂದ್ರದ ಬಿಜೆಪಿ ಸರ್ಕಾರ ತಾರತಮ್ಯದ ಸಿಎಎ ಕಾಯ್ದೆಯನ್ನು ಜಾರಿಗೆ ತಂದಿದೆ.
ಅಸ್ಸಾಂನಲ್ಲಿನ ಸ್ಥಳೀಯ ಸಮುದಾಯಗಳನ್ನು ಪ್ರತಿನಿಧಿಸುವ ವಿವಿಧ ಗುಂಪುಗಳು 1985 ರ ಅಸ್ಸಾಂ ಒಪ್ಪಂದವನ್ನು ಅಪಹಾಸ್ಯ ಮಾಡುತ್ತದೆ ಎಂದು ಹೇಳಿದೆ, ಇದು ಮಾರ್ಚ್ 24, 1971 ರ ಮಧ್ಯರಾತ್ರಿಯನ್ನು “ಅಕ್ರಮ ವಲಸಿಗರನ್ನು” ಪತ್ತೆಹಚ್ಚಲು, ಬಂಧಿಸಲು ಮತ್ತು ಗಡೀಪಾರು ಮಾಡಲು ಕಡಿತ ದಿನಾಂಕವಾಗಿದೆ. ಈ ದಿನಾಂಕದ ಆಧಾರದ ಮೇಲೆ ಅಸ್ಸಾಂನಲ್ಲಿ ಎನ್ಆರ್ಸಿಯನ್ನು ನವೀಕರಿಸಲಾಗಿದೆ.
