ವರದಿಗಾರ (ಸೆ.10): ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಸುರಂಗದೊಳಗೆ ಅಡಗಿಸಿಟ್ಟಿದ್ದ 1 ಟನ್ 350 ಕೆ.ಜಿ, 300 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಗಾಯತ್ರಿನಗರ ನಿವಾಸಿ ಜ್ಞಾನಶೇಖರ್ (37), ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಸಿದ್ದುನಾಥ ಲಾವಟೆ (22), ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗನಾಥ (39), ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಚಂದ್ರಕಾಂತ್ (34) ಬಂಧಿತ ಆರೋಪಿಗಳು.
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಲಚ್ಚು ನಾಯಕ ತಾಂಡಾ ಬಳಿಯ ಕುರಿ ಫಾರ್ಮ್ ನಲ್ಲಿ ಗಾಂಜಾ ಅಡಗಿಸಿಟ್ಟಿದ್ದಾಗಿ ಆರೋಪಿಗಳು ಹೇಳಿದ್ದರು. ಈ ಕುರಿ ಫಾರ್ಮ್ ಚಂದ್ರಕಾಂತ್ ಗೆ ಸೇರಿದ್ದಾಗಿದೆ. ಹೆಸರಿಗೆ ಕುರಿ ಫಾರ್ಮ್ ಆದರೂ ಇಲ್ಲಿ ಕುರಿ ಸಾಕಾಣಿಕೆ ಇರಲಿಲ್ಲ. ಅಲ್ಲಿಗೆ ಭೇಟಿ ನೀಡಿದಾಗ, ಕುರಿ ಫಾರ್ಮ್ ಒಳಗೆ ವಿಶಾಲ ಪ್ರದೇಶವಿದ್ದು, ಅಲ್ಲಿ ಗಾಂಜಾ ಇಟ್ಟ ಯಾವ ಕುರುಹೂ ಕಂಡುಬರಲಿಲ್ಲ. ಮತ್ತೆ ಚಂದ್ರಕಾಂತ್ ನನ್ನು ವಿಚಾರಣೆ ನಡೆಸಿದಾಗ, ನೆಲದ ಮೇಲಿದ್ದ ಮಣ್ಣನ್ನು ಕೊಂಚ ಸರಿಸಿದಾಗ ಹಲಗೆಯೊಂದು ಪತ್ತೆಯಾಯಿತು. ಆ ಹಲಗೆಯನ್ನು ತೆಗೆದಾಗ ಒಳಗಡೆ ರಹಸ್ಯ ಅಂಡರ್ ಗ್ರೌಂಡ್ ಪತ್ತೆಯಾಯಿತು. ಚಂದ್ರಕಾಂತ್ ಗಾಂಜಾ ಶೇಖರಣೆ ಮಾಡಿ ಇಡಲು ಈ ಸುರಂಗವನ್ನು ನಿರ್ಮಿಸಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಪೊಲೀಸರ ಸಮ್ಮುಖದಲ್ಲಿ ಚಂದ್ರಕಾಂತ್ ರಹಸ್ಯ ಸುರಂಗವನ್ನು ತೆರೆದಾಗ ಸುಮಾರು 5 ಅಡಿ ಆಳಕ್ಕೆ ಸುರಂಗ ನಿರ್ಮಿಸಲಾಗಿತ್ತು. ಅದೇ ಜಾಗದಲ್ಲಿ ಗಾಂಜಾ ಪ್ಯಾಕೇಟ್ ಗಳನ್ನು ಇಡಲಾಗಿತ್ತು. ಪರಿಶೀಲನೆ ನಡೆಸಿದಾಗ ಸುರಂಗದಲ್ಲಿ ಸುಮಾರು 600 ಗಾಂಜಾ ಪ್ಯಾಕೇಟ್ ಪತ್ತೆಯಾಗಿದೆ. ಅಲ್ಲಿಂದ ಗಾಂಜಾ ಹೊರತೆಗೆದು ಪರಿಶೀಲಿಸಿದಾಗ 1200 ಕೆ.ಜಿ.ಗಾಂಜಾ ಇರುವುದು ಬೆಳಕಿಗೆ ಬಂದಿದೆ ಎಂದು ಕಮಲ್ ಪಂತ್ ವಿವರಿಸಿದರು.
