ವರದಿಗಾರ (ಸೆ.9): ತನ್ನನ್ನು ಆತನಿಗೆ ವಿವಾಹ ಮಾಡಿಕೊಡಲಿಲ್ಲ ಎಂಬ ಕಾರಣದಿಂದ ಕುಪಿತಗೊಂಡ ಭೂಗತ ಪಾತಕಿಯೊಬ್ಬ ಪೋಷಕರಿಗೆ ಬೆದರಿಕೆಯೊಡ್ಡಿದ್ದು, ಕುಟುಂಬದ ರಕ್ಷಣೆಗೆ ನೆರವಾಗಬೇಕೆಂದು 13 ವರ್ಷದ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾಳೆ.
ತಿರುವನಂತಪುರದ ಹೋಲಿ ಏಂಜಲ್ಸ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಗೌರಿ ನಂದನ ಪತ್ರ ಬರೆದಿರುವ ಬಾಲಕಿ. ಭೂಗತ ಪಾತಕಿಯೊಬ್ಬ ತನ್ನ ತಂದೆಗೆ ಬೆದರಿಕೆಯೊಡ್ಡಿರುವ ಅಡಿಯೋ ಕ್ಲಿಪ್ ಅನ್ನು ಬಾಲಕಿ ಬಹಿರಂಗಗೊಳಿಸಿದ್ದಾಳೆ.
ತಿರುವನಂತರಪುರಂನ ಪೆಟ್ಟಾ ಎಂಬಲ್ಲಿನ ಶಂಕರ್ ಎಂಬುವನ ನೇತೃತ್ವದ ಕ್ರಿಮಿನಲ್ ಗ್ಯಾಂಗ್ ನೊಂದಿಗೆ ಉನ್ನತ ಪೊಲೀಸ್ ಅಧಿಕಾರಿಗಳು ಶಾಮೀಲಾಗಿ ಕುಟುಂಬಕ್ಕೆ ನ್ಯಾಯ ಒದಗಿಸಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ.
ಕೆಲವು ದಿನಗಳ ಹಿಂದೆ ಬಾಲಕಿ ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ, ಕಾರ್ಗಿಲ್ ಸಮರದಲ್ಲಿ ಸೇವೆ ಸಲ್ಲಿಸಿರುವ ತನ್ನ ತಂದೆಯ ವಿರುದ್ಧ ಈ ಕ್ರಿಮಿನಲ್ ತಂಡ ಹಲವು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿದೆ ಎಂದು ದೂರಿದ್ದಾಳೆ.
ಈ ಪತ್ರದಲ್ಲಿ ಬಾಲಕಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ಹೆಸರನ್ನು ಪ್ರಸ್ತಾಪಿಸಿ ಅವರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾಳೆ.
