ವರದಿಗಾರ (ಸೆ.8): ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿ ಬೀಳುತ್ತಿರುವವರು ಬಿಜೆಪಿಯ ಜೊತೆಗೆ ಅಂತರಂಗ -ಬಹಿರಂಗ ಸಖ್ಯ ಇರುವವರೇ ಆಗಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಹೇಳಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್, ಡ್ರಗ್ ಮಾಫಿಯಾ ಮಟ್ಟಹಾಕಲು ಕುಮಾರಸ್ವಾಮಿಯವರು ಮಂತ್ರಿಯಾಗಿದ್ದಾಗ ಬಿಸಿ ಮುಟ್ಟಿಸಿದ್ದರಿಂದಲೇ ದೇಶಾಂತರ ಓಡಿಹೋಗಿ ತಲೆಮರೆಸಿಕೊಂಡಿದ್ದವರು ಈಗ ಜಾಮೀನು ಪಡೆದು ಬಂದು ಮತ್ತೆ ದಂಧೆಯಲ್ಲಿ ತೊಡಗಿದ್ದಾರೆ. ಇದಕ್ಕೆ ತೆರೆಮರೆಯಲ್ಲಿ ನಿಂತು ವ್ಯವಸ್ಥೆ ಮಾಡಿದವರು ಯಾರು ಎಂಬುದು ಗುಟ್ಟಾಗಿ ಉಳಿದಿಲ್ಲ ಬಿಜೆಪಿ ನಾಯಕರ ವಿರುದ್ಧ ಸಾರಾ ಮಹೇಶ್ ಕಿಡಿಕಾರಿದ್ದಾರೆ.
ಅಧಿಕಾರದ ಆಸೆಗಾಗಿ ಬಣ್ಣ ವೇಷ ಬದಲಿಸುವ ಜಾಯಮಾನ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಕರಗತವಾಗಿದೆ. ಊಸರವಳ್ಳಿಯನ್ನು ನಾಚಿಸುವಂತೆ ನಾಲಗೆಯ ಬಣ್ಣವನ್ನೂ ಬದಲಿಸುವ ಇಂತಹ ಬೃಹಸ್ಪತಿಗಳು ಕುಮಾರಸ್ವಾಮಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ಎಚ್ಚರಿಸಿದ್ದಾರೆ.
