ವರದಿಗಾರ (ಸೆ.10): ಫ್ರಾನ್ಸ್ ನಿಂದ ಜುಲೈ 27ರಂದು ಭಾರತಕ್ಕೆ ಬಂದಿದ್ದ ಮೊದಲ ತಂಡದ ಐದು ರಫೇಲ್ ಯುದ್ಧ ವಿಮಾನಗಳು ಅಂಬಾಲ ವಾಯು ನೆಲೆಯಲ್ಲಿ ಇಂದು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಯಿತು.
ಈ ವಿಮಾನಗಳು ಈಗ ಭಾರತೀಯ ವಾಯುಪಡೆಯ 17 ನೇ ಸ್ಕ್ವಾಡ್ರನ್ ‘ಗೋಲ್ಡನ್ ಆರೋಸ್’ ನ ಭಾಗವಾಗಿವೆ. ರಫೇಲ್ ಯುದ್ಧ ವಿಮಾನಕ್ಕೆ ಸಾಂಪ್ರದಾಯಿಕವಾಗಿ ಸರ್ವ ಧರ್ಮ ಪೂಜೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರಫೇಲ್ ಹಾಗೂ ತೇಜಸ್ ಹಾಗೂ ಸಾರಾಂಗ್ ವಿಮಾನಗಳು ವೈಮಾನಿಕ ಪ್ರದರ್ಶನ ನಡೆಸಿದವು. ನಂತರ ರಫೇಲ್ ಯುದ್ದ ವಿಮಾನಕ್ಕೆ ಸಾಂಪ್ರದಾಯಿಕ ಜಲಫಿರಂಗಿ ನಮನ ಸಲ್ಲಿಸಲಾಯಿತು.
ಮೊದಲು ಹಿಂದೂ ಧರ್ಮದ ಅನುಸಾರ ಹಿಂದೂ ಧಾರ್ಮಿಕ ಮುಖಂಡರು ಮಂತ್ರ ಪಠಣದಿಂದ ಪೂಜಾ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಇದರ ನಂತರ ಮುಸ್ಲಿಂ ಧರ್ಮಗುರುಗಳು ಪ್ರಾರ್ಥಿಸಿದರು. ಈ ವೇಳೆ ಅವರು, ಅಲ್ಲಾಹನು ಭಾರತದ ಸೈನಿಕರಿಗೆ ಶಕ್ತಿ ನೀಡಲಿ, ಶತ್ರುಗಳನ್ನು ಸೋಲಿಸಲು ಸೈನಿಕರಿಗೆ ಶಕ್ತಿ ದೊರೆಯಲಿ, ಅಲ್ಲಾಹನು ನಮ್ಮ ಪ್ರಧಾನಿ ಮತ್ತು ರಕ್ಷಣಾ ಸಚಿವರಿಗೆಇನ್ನಷ್ಟು ಶಕ್ತಿಯನ್ನು ನೀಡಲಿ. ವೀರ್ ಅಬ್ದುಲ್ ಹಮೀದ್ ಅವರಂತಹ ಧೈರ್ಯವನ್ನು ನಮ್ಮ ಸೈನಿಕರಿಗೆ ನೀಡಿಲಿ ಎಂದು ಪ್ರಾರ್ಥಿಸಿದರು.
ಬಳೀಕ ಸಿಖ್ ಧಾರ್ಮಿಕ ಮುಖಂಡರು ಕೂಡ ವಾಯುಪಡೆಯ ಯಶಸ್ಸಿಗೆ ಪ್ರಾರ್ಥಿಸಿದರು ಮತ್ತು ವಾಯುಪಡೆಯ ಶಕ್ತಿಯನ್ನು ಹೆಚ್ಚಿಸುವಂತೆ ದೇವರಲ್ಲಿ ಕೋರಿದರು. ಸಿಖ್ ಧಾರ್ಮಿಕ ಮುಖಂಡರು ‘ಜೋ ಬೋಲೆ ಸೋ ನಿಹಾಲ್’ ಎಂದು ಹೇಳಿದರು.
ಕೊನೆಯಲ್ಲಿ, ಕ್ರೈಸ್ತ ಧರ್ಮಗುರು ಬೈಬಲ್ ನ ಕೆಲವು ಸಾಲುಗಳನ್ನು ಓದಿದರು. “ನಾವು ದೇವರ ಇಚ್ಛೆಯನ್ನು ಅನುಸರಿಸುತ್ತೇವೆ. ಆತನ ಆದೇಶದಂತೆ ಮುಂದುವರಿಯುತ್ತೇವೆ. ದೇವರು ಅತ್ಯುನ್ನತ” ಎಂದು ಹೇಳಿದರು. ಕ್ರಿಶ್ಚಿಯನ್ ಗುರುಗಳು ತಮ್ಮ ಪ್ರಾರ್ಥನೆಯಲ್ಲಿ, ಹೊಸ ಶಸ್ತ್ರಾಸ್ತ್ರಗಳೊಂದಿಗೆ, ಸೈನ್ಯದ ಶಕ್ತಿ ಹೆಚ್ಚಾಗಬೇಕು ಮತ್ತು ದೇಶವನ್ನು ಗೆಲ್ಲಬೇಕು ಎಂದು ಹೇಳಿದರು.
ರಫೇಲ್ ಸೇರ್ಪಡೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ ರಕ್ಷಣಾ ಸಚಿವೆ ಪ್ಲೋರೆನ್ಸ್ ಪಾರ್ಲಿ, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯುಪಡೆಯ ಮುಖ್ಯಸ್ಥ ಎಸಿಎಂ ಆರ್ ಕೆ ಎಸ್ ಬೌದುರಿಯಾ ಉಪಸ್ಥಿತರಿದ್ದರು.
