ಬಾಬರಿ ಮಸೀದಿ ಬಳಿಕ ವಾರಾಣಸಿ, ಮಥುರಾದ ಮಸೀದಿಗಳ ಮೇಲೆ ಕಣ್ಣು
ವರದಿಗಾರ (ಸೆ.8): ರಾಮಜನ್ಮಭೂಮಿ ಚಳವಳಿಯ ಮಾದರಿಯಲ್ಲಿ ವಾರಾಣಸಿ ಮತ್ತು ಮಥುರಾದ ಹಿಂದೂ ದೇವಸ್ಥಾನಗಳನ್ನು ಮುಕ್ತಗೊಳಿಸಿ ಎಂಬ ಅಭಿಯಾನ ಆರಂಭಿಸುವುದಾಗಿ ಅಖಿಲ ಭಾರತೀಯ ಅಖಾರ ಪರಿಷತ್ ಸೋಮವಾರ ಘೋಷಿಸಿದೆ.
ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅವರ ಅಧ್ಯಕ್ಷತೆಯಲ್ಲಿ ಪ್ರಯಾಗ್ ರಾಜ್ ನಲ್ಲಿ ನಡೆದ 13 ಅಖಾರಗಳ ಮುಖ್ಯಸ್ಥರ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ.
ಇಂದು ನಾವು ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಮಥುರಾದ ಕೃಷ್ಣ ಜನ್ಮಭೂಮಿಯನ್ನು ಮುಕ್ತಗೊಳಿಸುವ ನಿರ್ಣಯವನ್ನು ಅಂಗೀಕರಿಸಿದ್ದೇವೆ. ಮುಸ್ಲಿಂ ದಾಳಿಕೋರರು ಮತ್ತು ಭಯೋತ್ಪಾದಕರು ಮೊಘಲ್ ಯುಗದಲ್ಲಿ ನಮ್ಮ ದೇವಾಲಯಗಳನ್ನು ನಾಶಪಡಿಸಿ, ಮಸೀದಿಗಳು ಅಥವಾ ಮಖ್ ಬರಾಗಳನ್ನು ನಿರ್ಮಿಸಿದರು. ಸಂತ ಸಮುದಾಯವು ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಗಾಗಿ ಚಳವಳಿಯನ್ನು ನಡೆಸಿ ಅಲ್ಲಿನ ಸಮಸ್ಯೆಯನ್ನು ಪರಿಹರಿಸಿದ್ದಾರೆ. ವಾರಣಾಸಿ ಮತ್ತು ಮಥುರಾದಲ್ಲಿ ನಾವು ಅದೇ ರೀತಿ ಮಾಡಲು ನಿರ್ಧರಿಸಿದ್ದೇವೆ. ಹಿಂದೂ ದೇವಾಲಯಗಳ ನಾಶ ಮಾಡಿದ್ದಕ್ಕೆ ಸಂಬಂಧಿಸಿ ವಾರಣಾಸಿ ಮತ್ತು ಮಥುರಾದಲ್ಲಿ ಅಖರಾ ಪರಿಷತ್ನಲ್ಲಿ ಈಗಾಗಲೇ ಎಫ್ಐಆರ್ ದಾಖಲಿಸಿದೆ ಎಂದು ನರೇಂದ್ರ ಗಿರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೇವಾಲಯಗಳನ್ನು ಮುಕ್ತಗೊಳಿಸಲು ಸಾಮೂಹಿಕ ಕಾನೂನು ಹೋರಾಟವನ್ನು ನಡೆಸಲು ಹಿಂದೂ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಸಹಾಯವನ್ನು ಪಡೆಯಲಾಗುವುದು ಎಂದು ಅವರು ತಿಳಿಸಿದರು.
ವಾರಣಾಸಿಯ ಜ್ಞಾನವಪಿ ಮಸೀದಿಯ ಬಳಿ ನೆಲವನ್ನು ಅಗೆಯುವಾಗ, ನಮ್ಮ ದೇವಾಲಯಗಳನ್ನು ನಾಶಪಡಿಸಿ ಅದರ ಮೇಲೆ ಮಸೀದಿಯನ್ನು ನಿರ್ಮಿಸಿರುವುದು ದೃಢಪಟ್ಟಿವೆ. ಈ ಕುರಿತ ಅವಶೇಷಗಳು ಕಂಡುಬಂದಿವೆ. ಮಥುರಾದಲ್ಲಿಯೂ ಅದೇ ರೀತಿ ಸಂಭವಿಸಿದೆ. ಈ ಪ್ರಕರಣದಲ್ಲಿ ಅಖಿಲ ಭಾರತೀಯ ಅಖಾರ ಪರಿಷತ್ ಒಂದು ಕಕ್ಷಿದಾರನಾಗಲಿದ್ದು, ಸಂಪೂರ್ಣ ಬದ್ಧತೆಯೊಂದಿಗೆ ಕಾನೂನು ಹೋರಾಟವನ್ನು ನಡೆಸಲಿದೆ. ನಾವು ಯಾವುದೇ ಅಸಾಂವಿಧಾನಿಕ ಮಾರ್ಗವನ್ನು ಅನುಸರಿಸುವುದಿಲ್ಲ. ತೀರ್ಪು ನಮ್ಮ ಪರವಾಗಿರುತ್ತದೆ ಎಂಬ ವಿಶ್ವಾಸವಿದೆ ನಮಗಿದೆ ಎಂದು ಅವರು ಹೇಳಿದರು.
ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಬಂದ ನಂತರವೇ ಕಾನೂನಿನ ಮೊರೆ ಹೋಗಲಾಗುವುದು ಎಂದು ಗಿರಿ ಹೇಳಿದರು.
“ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಅವರ ಪೂರ್ವಜರು ತಪ್ಪುಗಳನ್ನು ಮಾಡಿದ್ದಾರೆಂದು ಮನವರಿಕೆ ಮಾಡಲು ನಾವು ಪ್ರಯತ್ನಿಸುತ್ತೇವೆ. ಈಗಿನವರು ಅವರ ಪೂರ್ವಜರ ತಪ್ಪುಗಳನ್ನು ಸರಿಪಡಿಸಬೇಕು. ಮುಸ್ಲಿಮರು ಸ್ವತಃ ಮಸೀದಿಯನ್ನು ನಾಶಪಡಿಸಿ ದೇವಾಲಯವನ್ನು ನಿರ್ಮಿಸಬೇಕು. ಇದು ಅವರ ಹಿರಿಮೆಯನ್ನು ಎತ್ತಿ ತೋರಿಸುತ್ತದೆ. ಇಲ್ಲದಿದ್ದರೆ, ನಾವು ನ್ಯಾಯಾಂಗದ ಮೊರೆ ಹೋಗುತ್ತೇವೆ. ಆಗ ನ್ಯಾಯಾಲಯ ನೀಡುವ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಗಿರಿ ಹೇಳಿದರು.
