ವರದಿಗಾರ (ಸೆ.7): ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಕೇಂದ್ರ ಭದ್ರತಾ ಸಂಸ್ಥೆಗಳು ವೈ-ಪ್ಲಸ್ ವಿಭಾಗದ ಭದ್ರತೆಯನ್ನು ನೀಡಿದ್ದು, ಸುಮಾರು 10 ಸಶಸ್ತ್ರ ಕಮಾಂಡೋಗಳ ತಂಡ ಅವರಿಗೆ ಭದ್ರತೆ ಒದಗಿಸಲಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಕಂಗನಾ ಅವರಿಗೆ ಭದ್ರತೆ ಒದಗಿಸಲು ನಿರ್ಧರಿಸಿದ ಒಂದು ದಿನದ ನಂತರ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ನಟಿ ಕಂಗನಾ ಮುಂಬೈಗೆ ಭೇಟಿ ನೀಡುವ ಸಮಯದಲ್ಲಿ ಅವರಿಗೆ ವೈ ಶ್ರೇಣಿಯ ಭದ್ರತೆ ನೀಡಲಾಗುತ್ತದೆ. ಶಿಮ್ಲಾದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುವಾಗ ಮುಖ್ಯಮಂತ್ರಿ ಇದನ್ನು ಬಹಿರಂಗಪಡಿಸಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ನಂತರ ಮುಂಬೈಯಲ್ಲಿ ಅಸುರಕ್ಷಿತ ಭಾವನೆ ಹೊಂದಿದ್ದೇನೆ. ಚಲನಚಿತ್ರೋದ್ಯಮದ ಒಂದು ವಿಭಾಗದ ಜನ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ ಬಳಿಕ ಅಸುರಕ್ಷತೆ ಉಂಟಾಗಿದೆ ಎಂದು ಹೇಳಿದ್ದರು..
ಅರೆಸೈನಿಕ ಪಡೆ ಮೂಲಕ ಕಂಗನಾ ಅವರಿಗೆ ವೈ-ಪ್ಲಸ್ ವರ್ಗದ ಭದ್ರತೆಯನ್ನು ನೀಡಲು ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಕಂಗನಾ ಅವರು ಹಿಮಾಚಲ ಪ್ರದೇಶದ ಮಗಳಾಗಿದ್ದು ಪ್ರಸಿದ್ಧ ವ್ಯಕ್ತಿಯಾಗಿರುವುದರಿಂದ ಅವರಿಗೆ ಭದ್ರತೆಯನ್ನು ಒದಗಿಸುವುದು ನಮ್ಮ ಕರ್ತವ್ಯ” ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಹೇಳಿದ್ದಾರೆ.
ಈ ನಡುವೆ ಮುಂಬೈ ಮತ್ತು ಮಹಾರಾಷ್ಟ್ರದ ವಿರುದ್ಧ ಮಾಡಿದ ಟೀಕೆಗಳಿಗೆ ನಟಿ ಕ್ಷಮೆಯಾಚಿಸಬೇಕು ಎಂದು ಭಾನುವಾರ ಶಿವಸೇನೆ ಸಂಸದ ಸಂಜಯ್ ರಾವತ್ ಒತ್ತಾಯಿಸಿದ್ದರು.
ಕಂಗನಾ ಇತ್ತೀಚೆಗೆ ಟ್ವೀಟ್ ನಲ್ಲಿ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದರು “ಮುಂಬೈ ಪಾಕಿಸ್ತಾನ ಆಕ್ರಮಿತ-ಕಾಶ್ಮೀರದಂತೆ ಏಕೆ ಬದಲಾಗಿದೆ?” ಎಂದು ಕಂಗನಾ ಇತ್ತೀಚೆಗೆ ಟ್ವೀಟ್ ಮಾಡಿದ್ದರು., ಸೆಪ್ಟೆಂಬರ್ 1ರ ವರದಿಯೊಂದನ್ನು ಟ್ಯಾಗ್ ಮಾಡಿ, ಅಲ್ಲಿ ನಗರ ಪೊಲೀಸರಿಂದ ಭಯವಿದ್ದು ನಾನು ಮುಂಬೈಗೆ ಮರಳುವುದಿಲ್ಲ ಎಂದು ಹೇಳಿದ್ದರು.
