ವರದಿಗಾರ (ಸೆ.7): ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರ ಪೌರತ್ವವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ-ಪಿಐಎಲ್ ಅನ್ನು ವಜಾಗೊಳಿಸಿರುವ ಅಲಹಾಬಾದ್ ಹೈಕೋರ್ಟ್, ಅರ್ಜಿದಾರರಿಗೆ 25,000 ರೂ. ದಂಡ ವಿಧಿಸಿದೆ.
2016 ರಲ್ಲಿ ಕೇಂದ್ರ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಕನ್ನಯ್ಯ ದೇಶದ್ರೋಹದ ಘೋಷಣೆ ಕೂಗಿದ್ದರು ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು.
ನ್ಯಾಯಮೂರ್ತಿಗಳಾದ ಎಸ್.ಕೆ.ಗುಪ್ತಾ ಮತ್ತು ನ್ಯಾಯಮೂರ್ತಿ ಶಮೀಮ್ ಅಹ್ಮದ್ ಅವರನ್ನು ಒಳಗೊಂಡ ಪೀಠ, ವಾರಾಣಸಿಯ ನಾಗೇಶ್ವರ್ ಮಿಶ್ರಾ ಎಂಬಬವರು ಸಲ್ಲಿಸಿದ್ದ ಪಿಐಎಲ್ ಅನ್ನು ವಜಾಗೊಳಿಸಿದೆ.
“ಅಗ್ಗದ ಪ್ರಚಾರ” ಗಳಿಸಲು ಅರ್ಜಿ ಸಲ್ಲಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸೀಮಿತ ಶಕ್ತಿಯೊಂದಿಗೆ ಕೆಲಸ ಮಾಡುತ್ತಿರುವ ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ನ್ಯಾಯಾಲಯವು ಅರ್ಜಿದಾರರಿಗೆ 25 ಸಾವಿರ ರೂ.ದಂಡ ವಿಧಿಸಿದೆ.
ಪೌರತ್ವ ಎಂಬುದು 1955ರ ಭಾರತೀಯ ಪೌರತ್ವ ಕಾಯ್ದೆಯ ಸೆಕ್ಷನ್ 10 ಅನ್ನು ಅವಲಂಬಿಸಿರುವುದರಿಂದ ಅರ್ಜಿಯು ‘ಅರ್ಹತೆಯಿಲ್ಲದ’ ಮತ್ತು ‘ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲ್ಪಟ್ಟಿದೆ’ ಎಂದು ನ್ಯಾಯಾಲಯ ಹೇಳಿದೆ.
ಯಾವುದೇ ಆದೇಶ ನೀಡಲು ನಿರಾಕರಿಸಿದ ನ್ಯಾಯಾಲಯ, ” ಕನ್ಹಯ್ಯ ಕುಮಾರ್ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ದೆಹಲಿಯ ನ್ಯಾಯಾಲಯದ ಮುಂದೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಪೌರತ್ವವನ್ನು ರದ್ದುಗೊಳಿಸುವ ಪ್ರಶ್ನೆಯು ಇಲ್ಲಿ ಉದ್ಭವಿಸುವುದಿಲ್ಲ ಎಂದು ಹೇಳಿತು.
“ಪೌರತ್ವವನ್ನು ಕಳೆದುಕೊಳ್ಳುವುದು ಗಂಭೀರ ವಿಷಯವಾಗಿದೆ, ಏಕೆಂದರೆ ಇದು ಭಾರತದಲ್ಲಿ ವಾಸಿಸುವ ವ್ಯಕ್ತಿಯ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದು ವ್ಯಕ್ತಿಯನ್ನು ದೇಶರಹಿತನನ್ನಾಗಿ ಮಾಡುತ್ತದೆ” ಎಂದು ನ್ಯಾಯಪೀಠ ಹೇಳಿದೆ.
ಕುಮಾರ್ ಅವರು ಫೆಬ್ರವರಿ 9, 2016 ರಂದು ಜೆಎನ್ಯು ಕ್ಯಾಂಪಸ್ನಲ್ಲಿ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಆದರೆ ಈವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು.
