ರಾಜ್ಯ ಸುದ್ದಿ

ಬೆಳ್ತಂಗಡಿಯ ಗಣಿತ ಶಿಕ್ಷಕ ಯಾಕೂಬ್ ಸೇರಿದಂತೆ ರಾಜ್ಯದ ಮೂವರಿಗೆ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ!

ವರದಿಗಾರ (ಸೆ.4): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾಡಾದ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕ ಎಸ್ ಯಾಕೂಬ್ ಸೇರಿ ರಾಜ್ಯದ ಮೂವರು ಶಿಕ್ಷಕರು ಈ ಸಾಲಿನ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ ಮೂವರು ಸೇರಿ 47 ಅತ್ಯುತ್ತಮ ಶಿಕ್ಷಕರಿಗೆ ರಾಷ್ಟ್ರಪ್ರಶಸ್ತಿ ನೀಡಲಾಗುತ್ತದೆ.

ಈ ವರ್ಷ ಸಹ ಶಿಕ್ಷಣ ಸಚಿವಾಲಯ ಕರ್ನಾಟಕದ ಮೂವರೂ ಸೇರಿ 47 ಪ್ರತಿಭಾವಂತ ಶಿಕ್ಷಕರನ್ನು ಶಿಕ್ಷಕರ ದಿನದಂದು ಪುರಸ್ಕರಿಸುತ್ತಿದೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ನಾಡಾದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಎಸ್.  ಯಾಕೂಬ್ ಮತ್ತು ಕಲಬುರ್ಗಿ ಜಿಲ್ಲೆ, ಅಫ್ಜಲ್ಪುರ ತಾಲೂಕು, ಬಂದರವಾಡದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿ  ಸುರೇಖಾ ಜಗನ್ನಾಥ್ ಮತ್ತು ಬೆಂಗಳೂರು ಜಾಲಹಳ್ಳಿ ಎ.ಎಫ್.ಎಸ್. (ಪೂರ್ವ)ದ ಕೇಂದ್ರೀಯ ವಿದ್ಯಾಲಯದ ಮುಖ್ಯಶಿಕ್ಷಕಿ  ಚೆಮ್ಮಲಾರ್ ಶಣ್ಮುಗಮ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಳ್ತಂಗಡಿ ತಾಲೂಕು ನಾಡಾ ಸರ್ಕಾರಿ ಶಾಲೆಯ  ಯಾಕೂಬ್ ನಾವಿನ್ಯಪೂರ್ಣವಾಗಿ ಗಣಿತ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ. ಅವರು ಮೊಬೈಲ್ ಆಪ್ ಮತ್ತು ತಂತ್ರಾಂಶ ಬಳಸಿಕೊಂಡು ಗಣಿತವನ್ನು ಬೋಧಿಸುತ್ತಿದ್ದಾರೆ. ಜೊತೆಗೆ ತಾವೇ 50ಕ್ಕೂ ಹೆಚ್ಚು ಮಾದರಿಗಳನ್ನು ರೂಪಿಸಿದ್ದು ಈ ಮೂಲಕ ಮಕ್ಕಳಿಗೆ ಸುಲಭವಾಗಿ ಕಷ್ಟಕರವಾದ ಲೆಕ್ಕಗಳನ್ನು ಸುಲಭವಾಗಿ ಮಾಡುವುದನ್ನು ಕಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸ್ವಯಂ ಲೆಕ್ಕ ಅಭ್ಯಾಸ ಮಾಡಲು ಮತ್ತು ಕಲಿಯಲು ಉತ್ತೇಜಿಸುತ್ತಿದ್ದಾರೆ. ಹಲವು ಪುಸ್ತಕಗಳನ್ನೂ ಅವರು ಬರೆದಿದ್ದಾರೆ.

ಬಂದರವಾಡ ಸರ್ಕಾರಿ ಶಾಲೆಯ  ಸುರೇಖಾ ಜಗನ್ನಾಥ್ ಅವರು, ವಿಜ್ಞಾನ ಶಿಕ್ಷಕಿಯಾಗಿದ್ದು, ತಮ್ಮ ಶಾಲೆಯಲ್ಲಿ ಹಲವು ನಾವಿನ್ಯಪೂರ್ಣ ಬೋಧನಾಕ್ರಮಗಳನ್ನು ಅಳವಡಿಸಿದ್ದಾರೆ. ವಿಜ್ಞಾನ ಬೋಧನೆಗೆ ಪೂರಕವಾಗಿ ಅವರು 100ಕ್ಕೂ ಹೆಚ್ಚು ನಾವಿನ್ಯಪೂರ್ಣ ಮಾದರಿಗಳು, ಪ್ರಯೋಗ ಪರಿಕರ ರೂಪಿಸಿದ್ದು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕೆಯ ಬಗ್ಗೆ ಕುತೂಹಲ ಮತ್ತು ಆಸಕ್ತಿ ಮೂಡಿಸುತ್ತಿದ್ದಾರೆ. ಅವರು ಪ್ರಯೋಗಗಳ ಕುರಿತಂತೆ ಹಲವು ಲೇಖನಗಳನ್ನೂ ಪ್ರಕಟಿಸಿದ್ದಾರೆ. ಈ ಇಬ್ಬರು ಶಿಕ್ಷಕರೂ ರಾಜ್ಯಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.

ಶಣ್ಮುಗಮ್ ಅವರು, ಕೇಂದ್ರೀಯ ವಿದ್ಯಾಲಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿಯಾಗಿದ್ದು, ತಮ್ಮನ್ನು ಅತ್ಯಂತ ಸಮಗ್ರ ಮತ್ತು ಬಹುಮುಖಿ ಶಿಕ್ಷಕಿ ಎಂದು ನಿರೂಪಿಸಿದ್ದಾರೆ. ಇಂಗ್ಲಿಷ್ ಕಲಿಕೆಗೆ ಹೊಸ ಆಯಾಮ ನೀಡಿರುವ ಅವರು ಅದಕ್ಕಾಗಿ ತರಗತಿಯಲ್ಲಿನ ಆಟಿಕೆಗಳು ಮತ್ತು ಸಂಗೀತಮಯ ಕಾಗುಣಿತ, ನರ್ತನದ ಪದಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ  ವಿಧಾನಗಳನ್ನು ತಮ್ಮ ಬೋಧನೆಯಲ್ಲಿ ಅಳವಡಿಸಿಕೊಂಡಿದ್ದಾರೆ.  ಇದು ಚಿಕ್ಕ ಮಕ್ಕಳಿಗೆ ಹೊಸ ಭಾಷೆಯನ್ನು ಸುಲಭವಾಗಿ ಕಲಿಯಲು ನೆರವಾಗಿದೆ. ಜೊತೆಗೆ ಶಾಲಾ ಮಕ್ಕಳಿಗೆ ಬೆಂಗಳೂರಿನಲ್ಲಿ ನಾಶವಾಗಿರುವ ಕೆರೆಗಳು ಇತ್ಯಾದಿ ಸಾಮಾಜಿಕ ವಿಚಾರಗಳ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group