ರಾಷ್ಟ್ರೀಯ ಸುದ್ದಿ

ಫೇಸ್ ಬುಕ್ ನಿಂದ ಹೊರದಬ್ಬಲ್ಪಟ್ಟ  ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ವಿರುದ್ಧ 60ಕ್ಕೂ ಅಧಿಕ ಪ್ರಕರಣಗಳು

ವರದಿಗಾರ, (ಸೆ.4): ದ್ವೇಷದ ಹೇಳಿಕೆ ಮತ್ತು ಹಿಂಸಾಚಾರ ಪ್ರಚೋದನೆಯ ಕಾರಣದಿಂದ ಫೇಸ್ ಬುಕ್ ನಿಂದ ಹೊರದಬ್ಬಲ್ಪಟ್ಟ  ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ವಿರುದ್ಧ 60ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ  ಹೆಚ್ಚಿನವು ದ್ವೇಷ ಭಾಷಣಕ್ಕೆ ಸಂಬಂಧಿಸಿದ್ದಾಗಿವೆ ಎಂಬದು ಇದೀಗ ಬೆಳಕಿಗೆ ಬಂದಿದೆ.

ದೊಂಬಿ, ಗಲಭೆ ಪ್ರಚೋದಕ ಎಂದೇ ಕುಖ್ಯಾತಿ ಪಡೆದಿರುವ ರಾಜಾ ಸಿಂಗ್  ಪರ ಕಳೆದ ತೆಲಂಗಾಣ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಮತ್ತೊಬ್ಬ ಮುಸ್ಲಿಂ ದ್ವೇಷಕಾರುವ ನಾಯಕ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಿದ್ದರು.

ಮೇ 2017 ರಲ್ಲಿ ಓಲ್ಡ್ ಸಿಟಿಯನ್ನು ‘ಮಿನಿ-ಪಾಕಿಸ್ತಾನ’ ಎಂದು ಕರೆದ ಸಿಂಗ್, ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದರು. ಮಾತ್ರವಲ್ಲ “ಅಲ್ಲಿನ ಹಲವು ಮನೆಗಳಲ್ಲಿ ಬಾಂಬ್ ಮತ್ತು ಇತರ ಸ್ಫೋಟಕಗಳಿವೆ” ಎಂದು ಸಿಂಗ್ ಹೇಳಿದ್ದರು. ಈ ಬಗ್ಗೆ ಪೊಲೀಸರು ರಾಜಾ ಸಿಂಗ್  ವಿರುದ್ಧ ಪ್ರಕರಣ ದಾಖಲಿಸಿದ್ದರು.

ಜುಲೈ 2017 ರಲ್ಲಿ ಪಶ್ಚಿಮ ಬಂಗಾಳದ ಬದುರಿಯಾ ಮತ್ತು ಬಸಿರ್ಹತ್ ಜಿಲ್ಲೆಗಳಲ್ಲಿ ಉದ್ವಿಗ್ನತೆ ಉಂಟಾದ ಸಂದರ್ಭದಲ್ಲಿ, 2002 ರಲ್ಲಿ ಗುಜರಾತ್‌ನಲ್ಲಿ ಹಿಂದೂಗಳು ಪ್ರತಿಕ್ರಿಯಿಸಿದ ರೀತಿಯಲ್ಲೇ ಪ್ರತಿಕ್ರಿಯಿಸುವಂತೆ ರಾಜಾ ಸಿಂಗ್ ತೆಲಂಗಾಣದ ಹಿಂದೂ ಸಮುದಾಯಕ್ಕೆ ಕರೆ ನೀಡಿದ್ದರು.

“ಇಂದು, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ. ಬಂಗಾಳದಲ್ಲಿ ಹಿಂದೂಗಳು ಇರಬೇಕಾದರೆ ಗುಜರಾತ್‌ನಲ್ಲಿ ಹಿಂದೂಗಳು ಮಾಡಿದಂತೆ ಕೋಮು ಹಿಂಸಾಚಾರದಲ್ಲಿ ಭಾಗಿಯಾಗಿರುವ ಜನರಿಗೆ ಪ್ರತಿಕ್ರಿಯಿಸಿ, ಇಲ್ಲದಿದ್ದರೆ, ಶೀಘ್ರದಲ್ಲೇ ಬಂಗಾಳವು ಬಾಂಗ್ಲಾದೇಶವಾಗಿ ಬದಲಾಗುತ್ತದೆ ಎಂದು ಬಿಜೆಪಿ ಶಾಸಕ ರಾಜಾ ಸಿಂಗ್ ಹೇಳಿದ್ದರು.

ಅದೇ ರೀತಿ ‘ಪದ್ಮಾವತ್’ ಚಿತ್ರವನ್ನು ಪ್ರದರ್ಶಿಸಿದರೆ ಹೈದರಾಬಾದ್‌ನಲ್ಲಿ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಸಿಂಗ್ ಬೆದರಿಕೆ ಹಾಕಿದ್ದರು. ಚಿತ್ರವನ್ನು ಬಹಿಷ್ಕರಿಸುವಂತೆ ಕರೆ ಮಾಡಿದ್ದ ಅವರು, ಇದು “ಪ್ರತಿಯೊಬ್ಬ ರಾಷ್ಟ್ರೀಯವಾದಿಯ ಕರ್ತವ್ಯ, ಪ್ರತಿ ಹಿಂದೂಗಳ ಕರ್ತವ್ಯ ಮತ್ತು ಪ್ರತಿ ರಜಪೂತನ ಕರ್ತವ್ಯ” ಎಂದು ಹೇಳಿದ್ದರು.

ಮತ್ತೊಂದು ಸಂದರ್ಭದಲ್ಲಿ ರಾಜಾ ಸಿಂಗ್ ಮೂಲತಃ ಕಾಶ್ಮೀರಿ ಮುಸ್ಲಿಮರು “ದೇಶದ್ರೋಹಿಗಳು” ಎಂದು ಕರೆದಿದ್ದರು. ಮೇ 2017 ರಲ್ಲಿ ವೈರಲ್ ಆದ ವೀಡಿಯೊವೊಂದರಲ್ಲಿ, ಅಮರನಾಥದಂತಹ ಪವಿತ್ರ ತಾಣಗಳಿಗೆ ಭೇಟಿ ನೀಡುವ ಜನರು ಅಲ್ಲಿನ ಅಲ್ಪಸಂಖ್ಯಾತ ಸಮುದಾಯದ ಜನರಿಂದ ಏನನ್ನೂ ಖರೀದಿಸಬಾರದು ಎಂದು ಸಿಂಗ್ ಕರೆ ನೀಡಿರುವುದು ಕಂಡುಬಂದಿದೆ. “ನಾವು ಕೆಲವು ವರ್ಷಗಳಿಂದ ಅವರಿಂದ ಏನನ್ನೂ ಖರೀದಿಸದಿದ್ದರೆ, ಈ ದೇಶದ್ರೋಹಿ ಕಾಶ್ಮೀರಿ ಮುಸ್ಲಿಮರು ಮಂಡಿಯೂರಿ, ನಮಗೆ ಪಾಕಿಸ್ತಾನ ಅಥವಾ ‘ಆಜಾದ್ ಕಾಶ್ಮೀರ’ ಬೇಡವೆಂದು ಹೇಳುತ್ತಾರೆ, ಕೊನೆಗೆ ಭಾರತದೊಂದಿಗೆ ಮಾತ್ರ ಉಳಿಯುತ್ತಾರೆ” ಎಂದು ಅವರು ಹೇಳಿರುವುದು ವಿವಾದಕ್ಕೆ ಕಾರಣವಾಗಿತ್ತು.

ಅದೇ ರೀತಿ ರಾಮಮಂದಿರಕ್ಕಾಗಿ ಜೀವಕೊಡುತ್ತೇನೆ, ವಂದೇ ಮಾತರಂ  ಹಾಡದವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು, ಪಿಣರಾಯಿ ವಿಜಯನ್ ಹಿಂದೂಗಳ ಕೊಲೆಗಾರ ಮುಂತಾದ ದ್ವೇಷಪೂರಿತ ಹೇಳಿಕೆಗಳನ್ನು ನೀಡಿರುವ ಸಿಂಗ್ ವಿರುದ್ಧ 60ಕ್ಕೂ ಅಧಿಕ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group