ರಾಜ್ಯ ಸುದ್ದಿ

ರಾಜ್ಯವನ್ನು ದಿವಾಳಿ ಮಾಡಲು ಹೊರಟಿರುವ ಬಿ.ಎಸ್.ಯಡಿಯೂರಪ್ಪ: ಸರಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ 

ವರದಿಗಾರ (ಸೆ.3): ಕೇಂದ್ರ ಸರ್ಕಾರದ ವಿಶ್ವಾಸದ್ರೋಹಕ್ಕೆ ತಲೆಬಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜಿಎಸ್ ಟಿ ಪರಿಹಾರವನ್ನು ತುಂಬಿಕೊಳ್ಳಲು ಆರ್ ಬಿ ಐನಿಂದ ಸಾಲ ಪಡೆಯಲು ತೀರ್ಮಾನಿಸುವ ಮೂಲಕ ರಾಜ್ಯದ ಜನತೆಯನ್ನು ಸಾಲದ ಶೂಲಕ್ಕೆ ಒಡ್ಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಸಿದ್ದರಾಮಯ್ಯ ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ನೀಡಿರುವ ಹೇಳಿಕೆಯನ್ನು ಕೆಳಗೆ ನೀಡಿದ್ದೇವೆ.

‘ಸಾಲಮಾಡಿಯಾದರೂ ಕೊರೊನಾ ನಿಯಂತ್ರಿಸುತ್ತೇನೆ, ಪ್ರವಾಹ ಪೀಡಿತರ ಪರಿಹಾರ ನೀಡುತ್ತೇನೆ, ಸರ್ಕಾರಿ ನೌಕರರ ಸಂಬಳಕ್ಕೆ ಸಾಲ ಮಾಡುತ್ತೇನೆ… ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪ್ರತಿಯೊಂದಕ್ಕೂ ಸಾಲದ ಮಂತ್ರ ಪಠಿಸುತ್ತಾ ಬಂದಿದ್ದಾರೆ.. ಇವರೇನು ರಾಜ್ಯ ಸರ್ಕಾರವನ್ನು ದಿವಾಳಿ ಮಾಡಲು ತೀರ್ಮಾನಿಸಿದ್ದಾರೆಯೇ?’

‘2020-21ರ ಅಂತ್ಯಕ್ಕೆ ಸಾಲದ ಪ್ರಮಾಣ ರೂ.3,68,692 ಕೋಟಿಯಷ್ಟಾಗಬಹುದೆಂದು ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಹೇಳಿದ್ದರು. ಕೊರೊನಾದಿಂದಾಗಿ ತೆರಿಗೆ ಸಂಗ್ರಹ ಗಣನೀಯವಾಗಿ ಕುಸಿದ ಪರಿಣಾಮ ಆರ್ಥಿಕ ಜವಾಬ್ದಾರಿಯನ್ನು ತೂಗಿಸಲು ಇನ್ನಷ್ಟು ಸಾಲ ಮಾಡುವುದು ಅನಿವಾರ್ಯವಾಗಬಹುದು. ವಿತ್ತೀಯ ಕೊರತೆಯೂ ಖಂಡಿತ ಹೆಚ್ಚಲಿದೆ. ಇದರ ಜೊತೆಗೆ ಜಿಎಸ್ ಟಿ ಪರಿಹಾರಕ್ಕಾಗಿಯೂ ಆರ್ ಬಿ ಐಯಿಂದ ಸಾಲ ಮಾಡಲು ರಾಜ್ಯ ಸರ್ಕಾರ ಹೊರಟಿದೆ.’

‘ಇದರಿಂದ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ ನಿಗದಿಪಡಿಸಸಿರುವ ಶೇಕಡಾ 25ರ ಮಿತಿಯನ್ನು ನಮ್ಮ ಒಟ್ಟು ಸಾಲದ ಮೊತ್ತ ಮೀರಲಿದ್ದು ರಾಜ್ಯ ದಿವಾಳಿ ಸ್ಥಿತಿಗೆ ತಲುಪಲು ಇನ್ನೇನು ಬೇಕು?’

‘ಈ ಸಾಲದ ಸುಳಿ ಕೇವಲ ರೂ.11,324 ಕೋಟಿಗಷ್ಟೇ ಖಂಡಿತ ಸೀಮಿತವಾಗಲಾರದು. ಇದು ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಬೇಕಾಗಿರುವ ಒಟ್ಟು ಜಿಎಸ್ ಟಿ ಪರಿಹಾರ ಮೊತ್ತವಾದ 97,000 ಕೋಟಿಯಲ್ಲಿ ರಾಜ್ಯದ ಪಾಲು ಅಷ್ಟೆ. ಇದರ ಜೊತೆಯಲ್ಲಿ ಕೇಂದ್ರ ಸರ್ಕಾರ ಕೊರೊನಾದಿಂದಾಗಿ ಜಿಎಸ್ ಟಿ ಒಟ್ಟು ನಷ್ಟ 2,35,00 ಕೋಟಿ ಎಂದು ಅಂದಾಜು ಮಾಡಿದೆ. ಇದನ್ನು ಕೇಂದ್ರ ಸರ್ಕಾರ ತುಂಬಿಕೊಡಲಿದೆಯೇ? ಇಲ್ಲವೇ ಇದನ್ನು ಕೂಡಾ ರಾಜ್ಯ ಸರ್ಕಾರದ ತಲೆಗೆ ಹೇರಿ ಸಾಲ ಮಾಡಲು ಆದೇಶ ನೀಡಲಿದೆಯೇ?’

‘ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯವನ್ನು ಮುಚ್ಚಿಹಾಕಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಹಿತವನ್ನು ಬಲಿಗೊಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಬೀದಿಗಿಳಿದು ರಾಜ್ಯ ಸರ್ಕಾರ ಜನತೆಗೆ ಬಗೆದಿರುವ ದ್ರೋಹವನ್ನು ಎಳೆಎಳೆಯಾಗಿ ಬಿಚ್ಚಿಡಲಿದೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group