ವರದಿಗಾರ (ಸೆ.3): ಹೋರಾಟಗಾರರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ತೆಗೆಯುವ ನೆಪಹೇಳಿ ರಾಜ್ಯ ಬಿಜೆಪಿ ಸರ್ಕಾರ ತಮ್ಮದೇ ಪಕ್ಷದ ಶಾಸಕರ ಹಾಗೂ ಬಿಜೆಪಿ ಮುಖಂಡರ ಮೇಲೆ ಇರುವ 62 ಗಂಭೀರ ಸ್ವರೂಪದ ಕೊಲೆಯತ್ನ, ಸಾರ್ವಜನಿಕ ಆಸ್ತಿ ನಷ್ಟ, ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಸೇರಿ ಇನ್ನಿತರರ ಪ್ರಕರಣಗಳನ್ನು ರದ್ದು ಮಾಡುತ್ತಿರುವ ಕ್ರಮ ಸರಿಯಾದ್ದುದ್ದಲ್ಲ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಖಂಡಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಒಂದು ಕಡೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ನಿಯಂತ್ರಣಕ್ಕೆ ಬಾರದೇ ಕೈ ಮೀರಿವೆ. ಈ ಬಗ್ಗೆ ಕ್ರಮವಹಿಸದ ರಾಜ್ಯ ಸರ್ಕಾರ ಸ್ವಹಿತ ಕಾಯ್ದುಕೊಳ್ಳುತ್ತಿದೆ. ಸರ್ಕಾರದ ಈ ನಡೆಯಿಂದ ದಂಧೆಕೋರರಿಗೆ ಇನ್ನಷ್ಟು ಕುಮ್ಮಕ್ಕು ನೀಡಿದಂತೆ ಆಗುತ್ತದೆ. ಕೂಡಲೇ ಸರ್ಕಾರ ತನ್ನ ನಡೆಯನ್ನು ವಾಪಾಸ್ಸು ಪಡೆಯಬೇಕು ಎಂದು ವೆಲ್ಫೇರ್ ಪಾರ್ಟಿ ಪ್ರಕಟಣೆಯಲ್ಲಿ ಆಗ್ರಹಿಸಿದೆ.
