ವರದಿಗಾರ (ಸೆ.3): ಉದ್ಯೋಗ ನೀಡಿ, ಆತ್ಮಹತ್ಯೆ ನಿಲ್ಲಿಸಿ ಎಂಬ ಅಭಿಯಾನ ಆರಂಭಿಸಿರುವ ಯುವ ಕಾಂಗ್ರೆಸ್ ಬೆಂಗಳೂರಿನಲ್ಲಿಂದು ಕಾಲ್ನಡಿಗೆ ಜಾಥದ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದೆ.
ಆನಂದರಾವ್ ವೃತ್ತದ ಬಳಿ ಜಾಥಕ್ಕೆ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಚಾಲನೆ ನೀಡಿದರು. ಯುವ ಕಾಂಗ್ರೆಸ್ನ ನೂರಾರು ಯುವಕರು ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಬಿ.ವಿ.ಶ್ರೀನಿವಾಸ್ ಮಾತನಾಡಿ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳುತ್ತಾ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರು ಇರುವ ಉದ್ಯೋಗಗಳನ್ನೇ ನಾಶ ಮಾಡುತ್ತಿದ್ದಾರೆ. ಉದ್ಯೋಗ ಕೊಡುವುದಿರಲಿ, ಇದ್ದ ಉದ್ಯೋಗವನ್ನೂ ನಾಶ ಪಡಿಸುತ್ತಿದ್ದಾರೆ. ಹಿಂದೆಂದೂ ಇಲ್ಲದಷ್ಟು ನಿರುದ್ಯೋಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ದಾಖಲಾಗಿದೆ. ಕೆಲಸ ಇಲ್ಲದೆ, ದುಡಿಮೆ ಇಲ್ಲದೆ ದುಡಿಯುವ ವರ್ಗ ಪರಿತಪಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನೋಟು ಅಮ್ಯಾನೀಕರಣ, ಅವೈಜ್ಞಾನಿಕ ಜಿ.ಎಸ್ ಟಿಯಿಂದಾಗಿ ದೇಶದ ಆರ್ಥಿಕತೆ ಕುಸಿದಿದೆ. ಯುವಕರು ಅತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದರು.
