ವರದಿಗಾರ (ಸೆ.3): ದ್ವೇಷಪೂರಿತ ಭಾಷಣ ಪೋಸ್ಟ್ ಹಾಕಿ, ಫೇಸ್ಬುಕ್ನ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಬಿಜೆಪಿ ತೆಲಂಗಾಣ ಘಟಕದ ಶಾಸಕ ಟಿ. ರಾಜಾ ಸಿಂಗ್ ಅವರ ಫೇಸ್ಬುಕ್ ಖಾತೆಗೆ ನಿಷೇಧ ಹೇರಲಾಗಿದೆ ಎಂದು ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಸಾಮಾಜಿಕ ಮಾಧ್ಯಮ ಕಂಪನಿ ಫೇಸ್ಬುಕ್ ಆಡಳಿತಾರೂಢ ಬಿಜೆಪಿ ಪರವಾಗಿ ಹೇಗೆ ಕೆಲಸ ಮಾಡುತ್ತಿದೆ ಎಂಬ ಬಗ್ಗೆ ಭಾರತದಲ್ಲಿ ಹೆಚ್ಚುತ್ತಿರುವ ವಿವಾದದ ಮಧ್ಯೆಯೇ ಫೇಸ್ಬುಕ್ ಈ ಕ್ರಮ ಕೈಗೊಂಡಿದೆ.
ಮುಸ್ಲಿಮರನ್ನು ದೇಶದ್ರೋಹಿಗಳೆಂದು ಹಣೆಪಟ್ಟಿ ಕಟ್ಟಿ ಭಾರತದಲ್ಲಿ ರೋಹಿಂಗ್ಯಾ ನಿರಾಶ್ರಿತರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಬರೆದಿದ್ದ ಸಿಂಗ್ ಅವರ ದ್ವೇಷಪೂರಿತ ಪೋಸ್ಟ್ ಅನ್ನು ತೆಗೆದುಹಾಕುವ ವಿಚಾರವನ್ನು ಫೇಸ್ಬುಕ್ನ ಭಾರತದ ನೀತಿ ನಿರೂಪಣೆಯ ಮುಖ್ಯಸ್ಥ ಅಂಕಿ ದಾಸ್ ವಿರೋಧಿಸಿದ್ದಾರೆ ಎಂದು ಆಗಸ್ಟ್ 14 ರಂದು ವಾಲ್ ಸ್ಟ್ರೀಟ್ ವರದಿ ಮಾಡಿದ ನಂತರ ಈ ವಿವಾದ ಉಂಟಾಗಿತ್ತು. ವಾಲ್ಸ್ಟ್ರೀಟ್ ಈ ಸಂಬಂಧ ಅವರನ್ನು ಸಂಪರ್ಕಿಸಿದ ಬಳಿಕ ಇತರ ಬಿಜೆಪಿ ನಾಯಕರ ದ್ವೇಷಪೂರಿತ ಪೋಸ್ಟ್ಗಳನ್ನು ಫೇಸ್ಬುಕ್ನಿಂದ ತೆಗೆದುಹಾಕಲಾಗಿತ್ತು.
“ಹಿಂಸೆಯನ್ನು ಉತ್ತೇಜಿಸಿದ ಮತ್ತು ದ್ವೇಷ ಹರಡುವ ಮೂಲಕ ನಮ್ಮ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ನಾವು ರಾಜಾ ಸಿಂಗ್ ಅವರನ್ನು ಫೇಸ್ಬುಕ್ನಿಂದ ನಿಷೇಧಿಸಿದ್ದೇವೆ ಎಂದು ಫೇಸ್ಬುಕ್ ವಕ್ತಾರರು ಅಮೆರಿಕ ಮೂಲದ ವಾಲ್ ಸ್ಟ್ರೀಟ್ ಪತ್ರಿಕೆಗೆ ತಿಳಿಸಿದ್ದಾರೆ
“ನಿಯಮವನ್ನು ಉಲ್ಲಂಘಿಸುವವರನ್ನು ಮೌಲ್ಯಮಾಪನ ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
3 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಸಿಂಗ್ ಅವರಿಗೆ ಕನಿಷ್ಠ ಐದು ಪ್ರೊಫೈಲ್ಗಳಿವೆ. ನಿಷೇಧದ ಬಳಿಕ ಈ ಎಲ್ಲಾ ಖಾತೆಗಳಲ್ಲೂ “ಇದು ಇದೀಗ ನಿಮಗೆ ಲಭ್ಯವಿಲ್ಲ” ಎಂಬ ಸಂದೇಶವನ್ನು ತೋರಿಸುತ್ತಿದೆ.
ಕಳೆದ ತಿಂಗಳು, ಸಿಂಗ್ ಅವರು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯನ್ನು 2018ರಲ್ಲಿ “ಹ್ಯಾಕ್ ಮಾಡಿ ನಿರ್ಬಂಧಿಸಲಾಗಿತ್ತು ಎಂದು ಹೇಳಿಕೊಂಡಿದ್ದರು. ಬಿಜೆಪಿ ಶಾಸಕರು ತಮ್ಮ ಬಳಿ ಅಧಿಕೃತ ಯೂಟ್ಯೂಬ್ ಮತ್ತು ಟ್ವಿಟರ್ ಖಾತೆ ಮಾತ್ರ ಇದೆ ಎಂದು ಹೇಳಿದ್ದರು, ಈ ಖಾತೆಗಳ ಮೂಲಕ ತಾವು ಎಂದಿಗೂ ಯಾವುದೇ ದ್ವೇಷ ಹರಡುವ ಹೇಳಿಕೆ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.
ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಅಧ್ಯಕ್ಷತೆಯಲ್ಲಿ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯು ಬುಧವಾರ ಫೇಸ್ಬುಕ್ನ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ಅವರನ್ನು ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಪ್ರಶ್ನಿಸಿತ್ತು. ಬಿಜೆಪಿ ನಾಯಕರು ಪೋಸ್ಟ್ ಮಾಡಿದ ದ್ವೇಷಪೂರಿತ ವಿಷಯವನ್ನು ಫೇಸ್ಬುಕ್ ತೆಗೆದುಹಾಕುತ್ತಿಲ್ಲ ಎಂದು ಪ್ರತಿಪಕ್ಷಗಳು ಟೀಕಿಸಿವೆ ಎಂದು ವರದಿಗಳು ತಿಳಿಸಿವೆ.
“ಫೇಸ್ಬುಕ್ ಮುಕ್ತ ಮತ್ತು ಪಾರದರ್ಶಕ ವೇದಿಕೆಯಾಗಲು ಬದ್ಧವಾಗಿದೆ” ಎಂದು ವಕ್ತಾರರು ಸಭೆಯ ನಂತರ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು. ಇದಾದ ಬೆನ್ನಲ್ಲೇ ಬಿಜೆಪಿ ನಾಯಕನ ವಿರುದ್ಧ ಈ ಕ್ರಮ ಕೈಗೊಂಡಿದೆ
