ವರದಿಗಾರ-ಜೋಧಪುರ: ರಾಜಸ್ಥಾನದ ಜೋಧಪುರದ ಉಮೈದ್ ಆಸ್ಪತ್ರೆಯಲ್ಲಿ ಮಂಗಳವಾರ ವೈದ್ಯರು ತೀವ್ರ ನೋವಿನಿಂದ ನರಳುತ್ತಿದ್ದ ಗರ್ಭಿಣಿಗೆ ತುರ್ತು ಶಸ್ತ್ರಚಿಕಿತ್ಸೆ ಕೈಗೊಂಡಿದ್ದರು. ಗರ್ಭಿಣಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ಸಂದರ್ಭ ಇಬ್ಬರು ವೈದ್ಯರ ನಡುವೆ ವಾಗ್ವಾದ ನಡೆದಿದೆ. ಇದೇ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಗರ್ಭದಿಂದ ಹೊರ ತೆಗೆದ ನವಜಾತ ಶಿಶು ಸಾವನ್ನಪ್ಪಿದೆ ಎಂದು ವರದಿಯಾಗಿದೆ.
ANI ವರದಿ ಪ್ರಕಾರ, ಈ ಬಗ್ಗೆ ಎಚ್ಚೆತ್ತುಕೊಂಡಿರುವ ಆಡಳಿತ ಮಂಡಳಿ ಕಿತ್ತಾಡಿಕೊಂಡ ಇಬ್ಬರೂ ವೈದ್ಯರನ್ನು ವಜಾಗೊಳಿಸಲಾಗಿದ್ದು, ಅವರ ಮೇಲೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಎಎಲ್ ಭಟ್ ತಿಳಿಸಿದ್ದಾರೆ.
ಈ ಕುರಿತಾಗಿನ ವೀಡಿಯೋ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಜವಾಬ್ದಾರಿಯುತವಾಗಿ ವರ್ತಿಸಬೇಕಾದ ವೈದ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಆಸ್ಪತ್ರೆಗೆ ದಾಖಲಾದಾಗಲೇ ಗರ್ಭದೊಳಗಿನ ಮಗುವಿನ ಹೃದಯ ಬಡಿತ ಕಡಿಮೆಯಾಗಿತ್ತು ಮತ್ತು ಮಹಿಳೆ ಅಪಾಯ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ. ಆದರೂ, ಮಗುವಿನ ಸಾವಿಗೆ ನಿಖರ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತದೆ ಎಂದು ಆಸ್ಪತ್ರೆಯ ಮೇಲ್ವಿಚಾರಕರು ಪ್ರತಿಕ್ರಿಯಿಸಿದ್ದಾರೆ.
