ರಾಷ್ಟ್ರೀಯ ಸುದ್ದಿ

ತಲೆಬಾಗುವುದಿಲ್ಲ, ಆದಿತ್ಯನಾಥ್ ಸರ್ಕಾರದ ಅನ್ಯಾಯದ ವಿರುದ್ಧ ಮಾತನಾಡುತ್ತಲೇ ಇರುತ್ತೇನೆ: ಜೈಲಿನಿಂದ ಬಿಡುಗಡೆ ಬಳಿಕ ಡಾ.ಕಫೀಲ್ ಖಾನ್

ವರದಿಗಾರ (ಸೆ.3): ತಾವು ಎಂದಿಗೂ ಅನ್ಯಾಯಕ್ಕೆ ತಲೆಬಾಗುವುದಿಲ್ಲ. ಮುಂದೆಯೂ ಆದಿತ್ಯನಾಥ್ ಸರ್ಕಾರದ ಅನ್ಯಾಯಗಳ ವಿರುದ್ಧ ಮಾತನಾಡುತ್ತಲೇ ಇರುತ್ತೇನೆ ಎಂದು ಸುಳ್ಳು ಪ್ರಕರಣದಲ್ಲಿ ಸುಮಾರು 7 ತಿಂಗಳ ಕಾಲ ಜೈಲುವಾಸ ಅನುಭವಿಸಿ ಅಲಹಾಬಾದ್ ಹೈಕೋರ್ಟ್‌ನ ಮಧ್ಯಪ್ರವೇಶದಿಂದ ಬಿಡುಗಡೆಗೊಂಡ ಡಾ.ಕಫೀಲ್ ಖಾನ್‌ ಹೇಳಿದ್ದಾರೆ.

ಸುಮಾರು ಏಳು ತಿಂಗಳ ಜೈಲುವಾಸದ ಬಳಿಕ ಡಾ. ಕಫೀಲ್ ಖಾನ್ ಅವರನ್ನು ಸೆಪ್ಟೆಂಬರ್ 1 ಮತ್ತು 2 ರ ಮಧ್ಯರಾತ್ರಿ ಮಥುರಾ ಜೈಲಿನಿಂದ ಬಿಡುಗಡೆ ಮಾಡಲಾಯಿತು, ಆದರೆ ಅವರು ಗೋರಖ್‌ಪುರಕ್ಕೆ ತೆರಳದೆ ನೇರವಾಗಿ ರಾಜಸ್ತಾನಕ್ಕೆ ತೆರಳಿದ್ದಾರೆ.

ವೀಡಿಯೋ ವೀಕ್ಷಿಸಿ

 

ಅವರು ಮನೆಗೆ ಮರಳಿದರೆ ಉತ್ತರ ಪ್ರದೇಶ ಪೊಲೀಸರು ಅವರ ಮೇಲೆ ಮತ್ತೆ ಹೊಸ ಆರೋಪಗಳನ್ನು ಹೊರಿಸಬಹುದು ಮತ್ತು ಅವರನ್ನು ಮತ್ತೆ ಜೈಲಿಗೆ ಕಳುಹಿಸಬಹುದು ಎಂದು ಖಾನ್ ಕುಟುಂಬ ಆತಂಕಗೊಂಡಿದೆ. ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳ ತಜ್ಞ  ಡಾ.ಕಫೀಲ್ ಖಾನ್‌ ಬಿಡುಗಡೆಯಾದ ಕೂಡಲೇ ರಾಜಸ್ಥಾನದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

2019ರ ಡಿಸೆಂಬರ್‌ನಲ್ಲಿ ನಡೆದ ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ ಪ್ರತಿಭಟನೆಯ ಸಂದರ್ಭದಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ಕ್ಯಾಂಪಸ್‌ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಆದರೆ ಸೆಪ್ಟೆಂಬರ್ 1 ರಂದು ಅಲಹಾಬಾದ್ ಹೈಕೋರ್ಟ್ ಅವರ ವಿರುದ್ಧದ ಪ್ರಕರಣ ರದ್ದಪಡಿಸಿ ಅವರನ್ನು ತಕ್ಷಣದ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.
ಆದರೆ ಅವರ ಬಿಡುಗಡೆಯನ್ನು ವಿಳಂಬಗೊಳಿಸುತ್ತಾ ಅವರ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲು ಹಿಂಬಾಗಿಲ ಮೂಲಕ ಪ್ರಯತ್ನಿಸುತ್ತಿದ್ದುದನ್ನು ಅರಿತುಕೊಂಡ ಖಾನ್ ಕುಟುಂಬ ತಕ್ಷಣ ಎಚ್ಚೆತ್ತುಕೊಂಡು, ಖಾನ್ ಅವರನ್ನು ಬಿಡುಗಡೆ ಮಾಡದಿದ್ದರೆ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಬಳಿಕ ಅವರನ್ನು ಬಿಡಗಡೆ ಮಾಡಲಾಯಿತು ಎಂದು “ದಿ ವೈರ್” ವರದಿ ಮಾಡಿದೆ.

ಬಿಡುಗಡೆಯ ಬಳಿಕ ಖಾನ್‌ ಕುಟುಂಬ, ಮಥುರಾದಿಂದ ಕೇವಲ 20 ಕಿ.ಮೀ ದೂರದಲ್ಲಿರುವ ರಾಜಸ್ಥಾನಕ್ಕೆ ತೆರಳಿದೆ.

“ದಿ ವೈರ್”ನೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಖಾನ್, ತಾವು ತಲೆಬಾಗುವುದಿಲ್ಲ. ಇನ್ನು ಮುಂದೆಯೂ ಆದಿತ್ಯನಾಥ್ ಸರ್ಕಾರದ ಅನ್ಯಾಯಗಳ ವಿರುದ್ಧ ಮಾತನಾಡುತ್ತಲೇ ಇರುತ್ತೇನೆ ಎಂದು ಹೇಳಿದರು.

ಉತ್ತರ ಪ್ರದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ವೈಫಲ್ಯ, ದೌರ್ಬಲ್ಯಗಳನ್ನು ಎತ್ತಿ ತೋರಿಸಿದ್ದಕ್ಕಾಗಿ ತಮ್ಮನ್ನು ತಿಂಗಳುಗಟ್ಟಲೆ ಜೈಲಿನಲ್ಲಿರಿಸಲಾಗಿದೆ ಎಂದು ಖಾನ್ ಹೇಳಿದರು.

ತಮ್ಮನ್ನು ಎನ್‌ಕೌಂಟರ್ ಮೂಲಕ ಮುಗಿಸದಿದ್ದುದಕ್ಕೆ ತಾವು ಯುಪಿ ವಿಶೇಷ ಟಾಸ್ಕ್ ಫೋರ್ಸ್‌ಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group