ರಾಜಸ್ತಾನದ ಸಿಕಾರ್ನಲ್ಲಿ ಹೇಯ ಕೃತ್ಯ
ವರದಿಗಾರ (ಸೆ.2): ರಾಜಸ್ಥಾನದ ಸಿಕಾರ್ ಜಿಲ್ಲೆಯ ಸಾನ್ಸಿ ಸಮುದಾಯಕ್ಕೆ ಸೇರಿದ ಒಬ್ಬ ಪುರುಷ ಮತ್ತು ಮಹಿಳೆಯನ್ನು ಆಗಸ್ಟ್ 21 ರಂದು ಖಾಪ್ ಪಂಚಾಯತ್, ನೂರಾರು ಜನರ ಮುಂದೆ ಸಾರ್ವಜನಿಕವಾಗಿ ಬಲವಂತದ ಸ್ನಾನ ಮಾಡಿಸಿರುವ ಹೇಯ ಘಟನೆ ನಡೆದಿದೆ.
ಪುರುಷ ಮತ್ತು ಮಹಿಳೆ ದೂರದ ಸಂಬಂಧಿಯಾಗಿದ್ದು, ಅವರ ನಡುವೆ ಪರಸ್ಪರ ಸಂಬಂಧ ಇತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಖಾಪ್ ಪಂಚಾಯತ್ ಸದಸ್ಯರು ಆತನಿಗೆ 31,000 ಹಾಗೂ ಆಕೆಗೆ 22000 ರೂ. ದಂಡ ವಿಧಿಸಿದ ಬಳಿಕ ಬಹಿರಂಗವಾಗಿ ಬಲವಂತದಿಂದ ಸ್ನಾನ ಮಾಡಿಸಿ ಸಮಾಜದೊಳಗೆ ಸೇರಿಸಿಕೊಂಡರು ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದ್ದರೂ, ಖಾಪ್ ಸದಸ್ಯರ ವಿರುದ್ಧದ ಆರೋಪಗಳು ಇನ್ನೂ ಸಾಬೀತಾಗಿಲ್ಲ ಎಂದು ಸಿಕಾರ್ ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ಆರೋಪಗಳು ಇನ್ನೂ ಸಾಬೀತಾಗಿಲ್ಲ. ಆದರೆ, ತನಿಖೆ ಪ್ರಗತಿಯಲ್ಲಿದೆ. ಘಟನೆ ನಡೆದ ಗ್ರಾಮದ ಸ್ಥಳೀಯರ ಹೇಳಿಕೆಗಳನ್ನು ನಾವು ದಾಖಲಿಸುತ್ತಿದ್ದೇವೆ. ಗ್ರಾಮಸ್ಥರು ತಮ್ಮ ಮೊಬೈಲ್ ಫೋನ್ಗಳಲ್ಲಿ ತೆಗೆದ ಘಟನೆಯ ವಿಡಿಯೋ ಅಥವಾ ಚಿತ್ರಗಳನ್ನು ಸಹ ನಾವು ಪಡೆಯಲು ಪ್ರಯತ್ನಿಸುತ್ತಿದ್ದೇವೆ” ಎಂದು ಸಿಕಾರ್ ಪೊಲೀಸ್ ವರಿಷ್ಠಾಧಿಕಾರಿ ಗಗನ್ದೀಪ್ ಸಿಂಗ್ಲಾ ತಿಳಿಸಿದ್ದಾರೆ.
