ವರದಿಗಾರ (ಸೆ.2): ಕೊರೊನಾ ನಿರ್ಬಂಧನಗಳನ್ನು ಉಲ್ಲಂಘಿಸಿ ನಮಾಜ್ಗಾಗಿ ಮಸೀದಿಗೆ ತೆರಳುತ್ತಿದ್ದ ಎಐಎಂಐಎಂ ಸಂಸದ ಇಮ್ತಿಯಾಝ್ ಜಲೀಲ್ ಅವರನ್ನು ಮಹಾರಾಷ್ಟ್ರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕೊರೊನಾ ಕಾರಣದಿಂದಾಗಿ ಮುಚ್ಚಲ್ಪಟ್ಟಿರುವ ಎಲ್ಲಾ ಧಾರ್ಮಿಕ ಸ್ಥಳಗಳನ್ನು ತೆರೆಯಬೇಕು. ಇಲ್ಲದಿದ್ದರೆ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವುದಾಗಿ ಸಂಸದ ಮತ್ತು ಅಖಿಲ ಭಾರತ ಮಜ್ಲಿಸ್-ಇ-ಇತ್ತಿಹಾದುಲ್ ಮುಸ್ಲಿಮೀನ್ ರಾಜ್ಯ ಘಟಕದ ಅಧ್ಯಕ್ಷ ಇಮ್ತಿಯಾಝ್ ಜಲೀಲ್ ಕಳೆದ ವಾರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಶಹಾಗಂಜ್ ಮಸೀದಿಗೆ ತೆರಳುತ್ತಿದ್ದಾಗ ಜಲೀಲ್ ಅವರನ್ನು ವಶಕ್ಕೆಪಡೆಕೊಂಡು ನಂತರ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಲ್ಲಾ ಧಾರ್ಮಿಕ ಸ್ಥಳಗಳನ್ನು ಸರ್ಕಾರ ತೆರೆಯದಿದ್ದರೆ ರಾಜ್ಯಾದ್ಯಂತ ಇದೇ ರೀತಿಯ ಪ್ರತಿಭಟನೆ ನಡೆಸುವುದಾಗಿ ಜಲೀಲ್ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಕೂಡ ಜಲೀಲ್ ಅವರು ಖಡ್ಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿನ ಆಡಳಿತಾಧಿಕಾರಿಗಳಿಗೆ ದೇವಸ್ಥಾನ ತೆರೆಯುವಂತೆ ಮನವಿ ಪತ್ರ ಸಲ್ಲಿಸುವುದಾಗಿ ಘೋಷಿಸಿದ್ದರು. ಈ ವೇಳೆ ಶಿವಸೇನೆ ಮತ್ತು ಎಐಎಂಐಎಂ ಕಾರ್ಯಕರ್ತರು ಪರಸ್ಪರ ಮುಖಾಮುಖಿಯಾದ ಘಟನೆಯೂ ನಡೆದಿತ್ತು.
