ರಾಜ್ಯ ಸುದ್ದಿ

ಪ್ರವಾದಿ ನಿಂದನೆ ವಿರುದ್ಧ ತಕ್ಷಣ ದೂರು ದಾಖಲಿಸಿದ್ದರೆ ಗಲಭೆ ತಪ್ಪಿಸಬಹುದಿತ್ತು; ಕೆ.ಜಿ.ಹಳ್ಳಿ,ಡಿ.ಜೆ.ಹಳ್ಳಿಗೆ ಭೇಟಿ ನೀಡಿದ ಬಳಿಕ ಸಿದ್ದರಾಮಯ್ಯ

ವರದಿಗಾರ (ಸೆ.2): ಪ್ರವಾದಿ ನಿಂದನೆ ಬಗ್ಗೆ  ತಕ್ಷಣ ಎಫ್ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರೆ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ತಪ್ಪಿಸಬಹುದಿತ್ತು. ಪೊಲೀಸರ ಮೀನಾಮೇಷ ಎಣಿಸಿದ್ದು ಸರಿಯಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಗಲಭೆ ಪೀಡಿತ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪ್ರದೇಶಕ್ಕೆ ಇಂದು ಭೇಟಿ ನೀಡಿ ಗಲಭೆಯಲ್ಲಿ ಹಾನಿಗೀಡಾದ ಶಾಸಕರ ನಿವಾಸ, ಡಿ.ಜೆ ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಸ್ಥಳೀಯ ಮುಖಂಡರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪೊಲೀಸರ ನಿರ್ಲಕ್ಷ್ಯದ ಪರಿಣಾಮ ಈ ಘಟನೆ ನಡೆಯಿತು. ಬೆಂಗಳೂರಿನ ಮಾನ ಮೂರು ಕಾಸಿಗೆ ಹರಾಜಾಯ್ತು. ನಮ್ಮ ಶಾಸಕರ ಮನೆಯೂ ಸುಟ್ಟೋಯ್ತು, ಇವೆಲ್ಲವನ್ನು ಯಾರಿಗೆ ಹೇಳೋಣ ಎಂದು ಬೇಸರ ವ್ಯಕ್ತಪಡಿಸಿದರು.

ಪೊಲೀಸರ ತನಿಖೆಗೆ ಮೊದಲೇ ಸಚಿವರು, ಗಲಭೆಯನ್ನು ಅವರು ಮಾಡಿದ್ದಾರೆ, ಇವರು ಮಾಡಿದ್ದಾರೆ ಎಂದು ತೀರ್ಪು ನೀಡಿದ್ದಾರೆ. ಈಗ ಪ್ರಾರಂಭಿಕ ಹಂತದಲ್ಲಿ ತನಿಖೆ ನಡೆಯುತ್ತಿದೆ. ಬಿಜೆಪಿ ನಾಯಕರ ರೀತಿಯಲ್ಲಿ ತಾವು ಈಗ ಯಾರ  ಮೇಲೂ ಆರೋಪ ಮಾಡುವುದಿಲ್ಲ. ತನಿಖೆಯಿಂದ ಸತ್ಯ ಹೊರಬಲಿದೆ ಎಂದು ಹೇಳಿದರು.

ಮಹಮ್ಮದ್ ಫೈಗಂಬರ್ ವಿರುದ್ಧ ಫೇಸ್‌ಬುಕ್ ಸ್ಟೇಟಸ್ ಹಾಕಿರುವುದು ಆಗಸ್ಟ್ 11 ರಂದು ಸಂಜೆ 6 ಗಂಟೆಗೆ ಕೆಲವರಿಗೆ ತಿಳಿಯುತ್ತದೆ. ಅದರ ಬಗ್ಗೆ 7.45ಕ್ಕೆ ಸ್ಥಳೀಯರು ದೂರು ನೀಡುವುದಕ್ಕೆ ಪೊಲೀಸ್ ಠಾಣೆಗೆ ಬರುತ್ತಾರೆ. ಆದರೆ ಪೊಲೀಸರು ದೂರು ಪಡೆಯಲು ಮೀನಾಮೇಷ ಮಾಡಿದ್ದಾರೆ. ದೂರು ಕೊಟ್ಟಾಗಲೇ ಎಫ್ಐಆರ್ ದಾಖಲಿಸಿದ್ದರೆ ಇವೆಲ್ಲಾ ನಡೆಯುತ್ತಿತ್ತಾ ಎಂದು ಪ್ರಶ್ನಿಸಿದ ಅವರು, ತಾವು ಕೂಡ ವಕೀಲಿಕೆ ಮಾಡಿಬಂದವನು. ತಮಗೂ ಪೊಲೀಸ್ ಸೆಕ್ಷನ್ ಗಳು ಗೊತ್ತಿಲ್ಲ ಎಂದು ತಿಳಿದುಕೊಳ್ಳಬೇಡಿ ಎಂದು ಖಾರವಾಗಿ ಹೇಳಿದರು.

ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರದ ಕೈಗೊಂಬೆಯಂತೆ ನಡೆದುಕೊಳ್ಳಬಾರದು. ಡಿ.ಜೆ.ಹಳ್ಳಿ,ಕೆಜಿ ಹಳ್ಳಿ ಗಲಾಟೆ ನಡೆದಾಗ ತಾವು ಆಸ್ಪತ್ರೆಯಲ್ಲಿ ಇದ್ದ ಕಾರಣ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇಂದು ಸ್ಥಳ ಪರಿಶೀಲನೆ ನಡೆಸಿದ್ದೇನೆ. ಪೊಲೀಸ್ ಗೋಲಿಬಾರ್‌ನಲ್ಲಿ ನಾಲ್ವರು ಮೃತಪಟ್ಟಿದ್ದಾರೆ.  ಪೊಲೀಸರು ಈಗಾಗಲೇ ಬಂಧಿಸಿರುವವರಲ್ಲಿ ಕೆಲವರು ಅಮಾಯಕರು ಎಂದು ಸ್ಥಳೀಯರು ಹೇಳಿದ್ದಾರೆ. ತನಿಖೆ ನಡೆಸುವಾಗ ಸೂಕ್ತ ಸಾಕ್ಷ್ಯಾಧಾರಗಳಿಲ್ಲವೆಂದರೆ ಅವರನ್ನು ಬಿಟ್ಟು ಕಳುಹಿಸಬೇಕು. ತಪ್ಪು ‌ಮಾಡಿದವರು, ಸಾಕ್ಷಿ ಇರುವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group