ಜಿಲ್ಲಾ ಸುದ್ದಿ

ಆಕ್ಸಿ ಮಿತ್ರ ನೂತನ ಅಭಿಯಾನಕ್ಕೆ ಕೈಜೋಡಿಸಲು ಆಮ್ ಆದ್ಮಿ ಪಕ್ಷ ಕರೆ

ವರದಿಗಾರ (ಸೆ.1): ಆಗಸ್ಟ್ ತಿಂಗಳ 6 ನೇ ತಾರೀಕಿನಂದು ಆಮ್ ಆದ್ಮಿ ಪಕ್ಷ “ಆಪ್ ಕೇರ್” ಎನ್ನುವ ವಿನೂತನ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಈ ಅಭಿಯಾನದ ಮೂಲಕ ಸಾರ್ವಜನಿಕರ ದೇಹದ ಉಷ್ಣತೆ ಹಾಗೂ ಆಮ್ಲಜನಕ ಮಟ್ಟವನ್ನು ಪರೀಕ್ಷಿಸಲಾಯಿತು, ಇದುವರೆಗೂ ಸುಮಾರು 1.27 ಲಕ್ಷ ಜನರನ್ನು ಭೇಟಿ ಮಾಡಿ ತಪಾಸಣೆಗೆ ಒಳಪಡಿಸಿದ್ದೇವೆ. 1 ಕೋಟಿಗೂ ಅಧಿಕ ಜನಸಂಖ್ಯೆ ಇರುವ ಬೆಂಗಳೂರಿನ ಜನರಲ್ಲಿ ನಾವು ತಲುಪಿರುವುದು ಕೇವಲ ಶೇ 1 ರಷ್ಟು ಮಾತ್ರ ಆದ ಕಾರಣ “ಆಕ್ಸಿ ಮಿತ್ರ” ದೇಹದ ಆಮ್ಲಜನಕ ಪ್ರಮಾಣ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದೇವೆ ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ ಹೇಳಿದರು.

ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದು ನಾವು ಬೆಂಗಳೂರಿನಾದ್ಯಂತದ ಜನರನ್ನು “ಆಕ್ಸಿಮಿತ್ರ ಅಭಿಯಾನ” ಕ್ಕೆ ಸ್ವಯಂಸೇವಕರಾಗಲು ಮತ್ತು ನಮ್ಮ ನಗರದ ಸಾವಿರಾರು ಜನರ ಜೀವ ಉಳಿಸಲು ಕೈಜೋಡಿಸುವ ಆಸಕ್ತಿ ಇರುವವರು ದೂರವಾಣಿ 8884431202 ಕ್ಕೆ ಕರೆ ಮಾಡಿ ಸಂಪರ್ಕಿಸಬಹುದು, ಅಧಿಕಾರ ಇಲ್ಲದ ನಾವುಗಳೇ ಕೇವಲ 20 ದಿನದಲ್ಲಿ ಇಷ್ಟೊಂದು ಪ್ರಮಾಣದ ಜನರನ್ನು ತಲುಪಿದ್ದೇವೆ ಎಂತಾದರೆ, ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಆಪ್ ಕೇರ್ ಅಭಿಯಾನ ನಡೆಸುವ ವೇಳೆ ನಾವು ಕೈಗೊಂಡ ಸಮೀಕ್ಷೆಯಲ್ಲಿ ತಿಳಿದ ಅಂಶದ ಪ್ರಕಾರ ಸುಮಾರು 10 ಜನರಲ್ಲಿ 4 ಜನ ಕಡಿಮೆ ಆಮ್ಲಜನಕದ ಮಟ್ಟ ಹೊಂದಿದ್ದಾರೆ. ಹೆಚ್ಚಿನ ಜನಸಾಮಾನ್ಯರಿಗೆ ಇದು ಕೊರೋನಾ ಸೋಂಕಿನ ರೋಗಲಕ್ಷಣ ಎಂದು ತಿಳಿಯದ ಕಾರಣ, ಅಂತಹವರಿಗೆ ಹೆಚ್ಚಿನ ಪರೀಕ್ಷೆಗಳನ್ನು ಮಾಡಿಸಲು ಸಹಾಯ ಮಾಡಲಾಯಿತು, ಆಸ್ಪತ್ರೆಗೆ ದಾಖಲಿಸಲಾಯಿತು, ಹಾಸಿಗೆ ಸಿಗುವಂತೆ ನೋಡಿಕೊಳ್ಳಲಾಯಿತು, ಸಾಕಷ್ಟು ಜನ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಕೊರೋನಾ ಬಂದವರನ್ನು ದೇವರೇ ಕಾಪಾಡಬೇಕು ಎಂದು ಹೇಳುವ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಅವರು ನಮ್ಮ ಕರ್ನಾಟಕದ ಜನರ ಕೈ ಬಿಟ್ಟಿರಬಹುದು ಆದರೆ ಎಎಪಿಯ ಸ್ವಯಂಸೇವಕರು, ನಮ್ಮ ಬೆಂಬಲಿಗರು ಜನರನ್ನು ಎಂದಿಗೂ ಬಿಡುವುದಿಲ್ಲ. ಈ ಹೋರಾಟದಲ್ಲಿ ನಾವು ಜನರೊಂದಿಗೆ ಇದ್ದೇವೆ, ಎಲ್ಲಾ ರೀತಿಯಲ್ಲಿ ಇರುತ್ತೇವೆ ಎಂದು ಆಮ್ ಆದ್ಮಿ ಪಕ್ಷ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶರತ್ ಖಾದ್ರಿ ನುಡಿದರು.

ಬಿಟಿಎಂ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಮಂಜುನಾಥ್ ಬನಶಂಕರಿ ಆಪ್ ಕೇರ್ ಅಭಿಯಾನದ ವೇಳೆ ತಮಗೆ ಆದ ಅನುಭವ ಹಂಚಿಕೊಂಡರು, ಬೆಂಗಳೂರು ನಗರ ಉಪಾಧ್ಯಕ್ಷ ಸುರೇಶ್ ರಾಥೋಡ್, ಯಲಹಂಕ ಕ್ಷೇತ್ರ ಅಧ್ಯಕ್ಷ ಫಣಿರಾಜ್ ಇದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ‌‌.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group