ವರದಿಗಾರ (ಸೆ.1): ಬಿಜೆಪಿ ಸೇರಲು ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ರೌಡಿ ಶೀಟರ್ ಒಬ್ಬ ಪೊಲೀಸರನ್ನು ಕಂಡು ಅಲ್ಲಿಂದ ಓಡಿಹೋದ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಇದರಿಂದ ರಾಜ್ಯ ಬಿಜೆಪಿ ಘಟಕ ತೀವ್ರ ಮುಜುಗರಕ್ಕೆ ಒಳಗಾಗುವಂತಾಯಿತು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಎಲ್. ಮುರುಗನ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಬೇಕಿದ್ದ ಆರು ಕೊಲೆ ಪ್ರಕರಣಗಳು ಸೇರಿದಂತೆ 50ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ದರೋಡೆಕೋರ ‘ರೆಡ್ಹಿಲ್ಸ್’ ಸೂರ್ಯ ಬಿಜೆಪಿ ಸೇರಲು ಆಗಮಿಸಿದ್ದ ರೌಡಿಶೀಟರ್.
ಆರೋಪಿಯ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಚೆಂಗಲ್ಪಟ್ಟು ಪೊಲೀಸರು, ವಂಡಲೂರು ಬಳಿಯ ಕಾರ್ಯಕ್ರಮ ಏರ್ಪಡಿಸಿದ್ದ ಸ್ಥಳಕ್ಕೆ ಆಗಮಿಸಿದರು. ಪೊಲೀಸರನ್ನು ಕಂಡ ತಕ್ಷಣ ರೌಡಿಶೀಟರ್ ಸೂರ್ಯ ತನ್ನ ಕಾರಿನಲ್ಲಿ ಪರಾರಿಯಾಗಿದ್ದಾನೆ. ಆದಾಗ್ಯೂ, ಆತನ ನಾಲ್ವರು ಸಹಚರರನ್ನು ಪೊಲೀಸರು ಬಂಧಿಸಿ ಅವರ ವಾಹನಗಳಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಲ್. ಮುರುಗನ್, ಬಿಜೆಪಿ ಸೇರಲು ಬಂದಿದ್ದವರ ಹಿನ್ನೆಲೆ ಬಗ್ಗೆ ತಮಗೆ ತಿಳಿದಿರಲಿಲ್ಲ. ಪಕ್ಷದ ಕಾರ್ಯಕರ್ತರೊಬ್ಬರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎಂದು ಅವರು ಮಾಹಿತಿ ನೀಡಿದರು.
‘ಕಲ್ವೆಟ್ಟು’ ರವಿ ಅಲಿಯಾಸ್ ರವಿಶಂಕರ್ ಮತ್ತು ಸತ್ಯರಾಜ್ ಎಂಬವರನ್ನು ಪಕ್ಷಕ್ಕೆ ಸೇರಿಸಿದ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಟೀಕೆಗಳು ಬಂದಿವೆ.
ಆರು ಕೊಲೆ ಮತ್ತು 13 ಸುಲಿಗೆ ಪ್ರಕರಣಗಳು, ಕ್ರಿಮಿನಲ್ ಬೆದರಿಕೆ ಮತ್ತು ಕೊಲೆ ಯತ್ನ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ರವಿ ಆರೋಪಿಯಾಗಿದ್ದಾನೆ. ಪಕ್ಷದ ಪ್ರಧಾನ ಕಾರ್ಯಾಲಯದಲ್ಲಿ ಇತ್ತೀಚೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕರು ನಾಗರಾಜನ್ ಅವರ ಸಮ್ಮುಖದಲ್ಲಿ ರವಿ ತನ್ನ ಬೆಂಬಲಿಗರೊಂದಿಗೆ ಪಕ್ಷಕ್ಕೆ ಸೇರಿದ್ದಾನೆ.
ಎರಡು ಕೊಲೆ ಪ್ರಕರಣಗಳು, ಆರು ದರೋಡೆ ಮತ್ತು ನಾಲ್ಕು ದೌರ್ಜನ್ಯ ಪ್ರಕರಣಗಳ ಆರೋಪಿಯಾದ ಸೇಲಂನ ಜೆ.ಜೆ.ಮುರಳಿಧರನ್ ಕೂಡ ಇತ್ತೀಚೆಗೆ ಪಕ್ಷ ಸೇರಿದ್ದು, ಆತನಿಗೆ ಜಿಲ್ಲಾ ಯುವ ವಿಭಾಗದ ಅಧ್ಯಕ್ಷ ಸ್ಥಾನ ನೀಡಲಾಗಿದೆ.
