ರಾಷ್ಟ್ರೀಯ ಸುದ್ದಿ

ಡಾ.ಕಫೀಲ್‌ ಖಾನ್‌ ವಿರುದ್ಧದ ಎನ್‌ಎಸ್ಎ ರದ್ದುಪಡಿಸಿ ತಕ್ಷಣ ಬಿಡುಗಡೆಗೊಳಿಸಿ: ಅಲಹಾಬಾದ್ ಹೈಕೋರ್ಟ್‌ನಿಂದ ಮಹತ್ವದ ತೀರ್ಪು

ವರದಿಗಾರ (ಸೆ.1): ಡಾ. ಕಫೀಲ್ ಖಾನ್ ಅವರ ವಿರುದ್ಧ ದಾಖಲಿಸಿರುವ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್ಎಸ್ಎ) ದಾಖಲಿಸಿರುವ ಪ್ರಕರಣಗಳನ್ನು ರದ್ದುಪಡಿಸಿ ತಕ್ಷಣ ಅವರನ್ನು ಬಿಡುಗಡೆ ಮಾಡುವಂತೆ ಮಂಗಳವಾರ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಖಾನ್ ಅವರ ತಾಯಿ ನುಝಹತ್ ಫರ್ವೀನ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿದೆ.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಮತ್ತು ನ್ಯಾಯಮೂರ್ತಿ ಸೌಮಿತ್ರ ದಯಾಳ್ ಸಿಂಗ್ ಅವರ ವಿಭಾಗೀಯ ಪೀಠ, ತಕ್ಷಣ ಕಫೀಲ್ ಅವರನ್ನು ಮಥುರಾ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶಿಸಿದೆ.

“ಫೆಬ್ರವರಿ 13, 2020ರಂದು ಅವರನ್ನು ಬಂಧನಕ್ಕೆ ಜಿಲ್ಲಾಧಿಕಾರಿ ಹಾಗೂ ಉತ್ತರ ಪ್ರದೇಶ ಸರ್ಕಾರ ನೀಡಿದ್ದ ಆದೇಶವನ್ನೂ ಹೈಕೋರ್ಟ್ ರದ್ದಪಡಿಸಿದೆ. ಬಂಧನಕ್ಕೊಳಗಾದ ಡಾ. ಕಫೀಲ್ ಖಾನ್ ಅವರ ಬಂಧನ ಅವಧಿಯ ವಿಸ್ತರಣೆ ಕೂಡ ಕಾನೂನುಬಾಹಿರವೆಂದು ನ್ಯಾಯಪೀಠ ಹೇಳಿದೆ.

2019, ಡಿಸೆಂಬರ್ 9ರಂದು ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಕಫೀಲ್ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಫೆಬ್ರವರಿ 10ರಂದು ಅವರಿಗೆ ಅಲಿಘಡ ಸಿಜೆಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದಾಗ್ಯೂ ಅವರ ಮೇಲೆ ಉತ್ತರ ಪ್ರದೇಶ ಸರ್ಕಾರ, ಎನ್‌ಎಸ್‌ಎ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮತ್ತೆ ಜೈಲಿಗೆ ಕಳುಹಿಸಿತ್ತು.
2017ರಲ್ಲಿ ಗೋರಕ್‌ಪುರ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 60ಕ್ಕೂ ಅಧಿಕ ಮಕ್ಕಳು ಮೃತಪಟ್ಟ ದುರಂತದ ಸಂದರ್ಭದಲ್ಲಿ ಸ್ವಂತ ಹಣದಿಂದ ಆಕ್ಸಿಜನ್ ಪೂರೈಕೆ ಮಾಡಿ ಮಕ್ಕಳ ಪ್ರಾಣ ಉಳಿಸಿದ ಕಾರಣಕ್ಕೆ ಖಾನ್ ಅವರ ಹೆಸರು ಪ್ರಸಿದ್ಧಿ ಪಡೆದಿತ್ತು.

ಆದರೆ ಅಲ್ಲಿನ ಸರ್ಕಾರ ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಿತ್ತು. ಆದರೆ ಹೈಕೋರ್ಟ್‌ ಅವರ ವಿರುದ್ಧದ ಆರೋಪವನ್ನು ತಳ್ಳಿಹಾಕಿ ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group