ವರದಿಗಾರ (ಆ.31): ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ಒಂದು ರೂಪಾಯಿ ದಂಡವನ್ನು ಗೌರವಯುತವಾಗಿ ಪಾವತಿಸುತ್ತೇನೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸೋಮವಾರ ಹೇಳಿದ್ದಾರೆ.
ಆದರೆ ತಮ್ಮ ಟ್ವೀಟ್ಗಳು ಸುಪ್ರೀಂ ಕೋರ್ಟ್ಗೆ ಅಥವಾ ಭಾರತದ ಮುಖ್ಯ ನ್ಯಾಯಾಧೀಶರಿಗೆ ಅಗೌರವ ತೋರುವ ಉದ್ದೇಶ ಹೊಂದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ತೀರ್ಪನ್ನು ಪುನರ್ ಪರಿಶೀಲಿಸುವಂತೆ ಅರ್ಜಿ ಸಲ್ಲಿಸುವ ಹಕ್ಕನ್ನು ತಾವು ಕಾಯ್ದಿರಿಸಿದ್ದರೂ, ದಂಡವನ್ನು ಗೌರವಯುತವಾಗಿ ಪಾವತಿಸುತ್ತೇನೆ ಎಂದು ಅವರು ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಯೊಬ್ಬ ಭಾರತೀಯನು ಕೂಡ ಪ್ರಬಲ ನ್ಯಾಯಾಂಗವನ್ನು ಬಯಸುತ್ತಾನೆ. ನ್ಯಾಯಾಲಯವು ದುರ್ಬಲಗೊಂಡರೆ ಅದು ಗಣರಾಜ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.
ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಪ್ರಶಾಂತ್ ಭೂಷಣ್ ಮಾಡಿದ್ದ ಎರಡು ಟ್ವೀಟ್ಗಳಿಂದ ನ್ಯಾಯಾಂಗ ನಿಂದನೆಯಾಗಿದೆ ಎಂದು ಸುಪ್ರೀಂಕೋರ್ಟ್ ಸ್ವಯಂ ದೂರು ದಾಖಲಿಸಿಕೊಂಡು ಭೂಷಣ್ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿ 1 ರೂಪಾಯಿ ದಂಡ ವಿಧಿಸಿತ್ತು.
