ಕುಟುಂಬದ ಸದಸ್ಯರಿಂದ ಠಾಣೆ ಎದುರು ಪ್ರತಿಭಟನೆ; ಸಬ್ ಇನ್ಸ್ ಪೆಕ್ಟರ್ ಅಮಾನತು
ವರದಿಗಾರ (ಆ.31): ದಲಿತ ಯುವಕನನ್ನು ಅಕ್ರಮವಾಗಿ ಪೊಲೀಸ್ ಠಾಣೆಯಲ್ಲಿ ಕೂಡಿಟ್ಟು ಕ್ರೂರವಾಗಿ ಥಳಿಸಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ರಾಯ್ಬರೇಲ್ವಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ.
19 ವರ್ಷದ ದಲಿತ ಯುವಕ ಮೋಹಿತ್ ಮೃತಪಟ್ಟ ವ್ಯಕ್ತಿ. ಈತನಲ್ಲಿ ಕೊರೊನಾ ಲಕ್ಷಣಗಳಿದ್ದವು ಎನ್ನಲಾಗಿದೆ. ಆದರೆ ಪೊಲೀಸರ ಹಿಂಸೆಯಿಂದಲೇ ಆತ ಮೃತಪಟ್ಟಿದ್ದಾನೆ ಎಂದು ಮೃತನ ಕುಟುಂಬದವರು ಆರೋಪಿಸಿ, ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಬೈಕ್ ಕಳ್ಳತನದ ಗ್ಯಾಂಗ್ನೊಂದಿಗೆ ಸಂಬಂಧ ಹೊಂದಿದ ಆರೋಪದಲ್ಲಿ ಮೋನು ಅಲಿಯಾಸ್ ಮೋಹಿತ್ ಎಂಬಾತನನ್ನು ರಾಯಿಬರೇಲ್ವಿಯ ಲಾಲ್ಗಂಜ್ ಪ್ರದೇಶದಲ್ಲಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಮೋನುಗೆ ಪೊಲೀಸ್ ಕಸ್ಟಡಿಯಲ್ಲಿ ಹಿಂಸಿಸಲಾಗಿದೆ. ಭಾನುವಾರ ಮಧ್ಯಾಹ್ನ ಆತ ಸಾವನ್ನಪ್ಪಿದ್ದಾನೆ. ಈ ಸುದ್ದಿ ತಿಳಿದ ನಂತರ ಅವರ ಕುಟುಂಬ ಸದಸ್ಯರು ಮತ್ತು ಸ್ಥಳೀಯರು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದರು.
“ಪೊಲೀಸರು ನನ್ನನ್ನು ಮತ್ತು ನನ್ನ ಸಹೋದರನನ್ನು ಬಂಧಿಸಿ ಕರೆದೊಯ್ದರು. ಬೈಕ್ಗಳ ಕೀಗಳು ಎಲ್ಲಿವೆ ಎಂದು ಕೇಳಿ ಥಳಿಸಿದರು ಎಂದು ಮೋನುವಿನ 19 ವರ್ಷದ ಸಹೋದರ ಸೋನು ಆರೋಪಿಸಿದ್ದಾನೆ.
ಆದರೆ, ಮೋನು ಚಿತ್ರಹಿಂಸೆಗೊಳಗಾಗಿದ್ದನ್ನು ಪೊಲೀಸರು ನಿರಾಕರಿಸಿದ್ದಾರೆ. ಬದಲಿಗೆ ಆತ ಭಾನುವಾರ ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆತನಿಗೆ ಕೊರೊನಾ ಲಕ್ಷಣಗಳಿದ್ದವು ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಮೋನು ಆ ಸಮಯದಲ್ಲಿ ಕೂಡ ಪೊಲೀಸರ ವಶದಲ್ಲೇ ಇದ್ದ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಆರೋಪಿಗಳನ್ನು 24 ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಅಕ್ರಮ ಬಂಧನದಲ್ಲಿಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದ್ದರಿಂದ ಠಾಣೆಯ ಅಧಿಕಾರಿಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
