ಜಿಲ್ಲಾ ಸುದ್ದಿ

ಕೊರೋನಾ ನಿಯಂತ್ರಿಸಲು ವಿಫಲವಾದ ಸರ್ಕಾರದ ವಿರುದ್ದ ಆಮ್ ಆದ್ಮಿ ಪಕ್ಷದ ವಿನೂತನ ಪ್ರತಿಭಟನೆ- ಆಪ್ ಕೇರ್ ಅಭಿಯಾನ

ವರದಿಗಾರ (ಆ.30): ತನ್ನ 10 ತಿಂಗಳ ಮಗು ಕಳೆದುಕೊಂಡ ತಂದೆಯೊಬ್ಬ ಸಿಎಂ ಮನೆ ಎದುರು ಪ್ರತಿಭಟನೆಗೆ ಮುಂದಾದ ಘಟನೆ ನಿಜಕ್ಕೂ ಭಯಾನಕ. ಸರಿಯಾದ ಮಾಹಿತಿ ದೊರೆಯದೆ ಸುಮಾರು 11 ಆಸ್ಪತ್ರೆಗಳನ್ನು ಸುತ್ತಿದರೂ ತನ್ನ ಮಗು ಉಳಿಸಿಕೊಳ್ಳಲಾಗದ ತಂದೆಯ ಪರಿಸ್ಥಿತಿ ಹಾಗೂ ಸರಿಯಾದ ಚಿಕಿತ್ಸೆ ಜತೆಗೆ ಸಲಹೆ ಸಿಗದೆ ಪ್ರಾಣ ಬಿಟ್ಟ ನೂರಾರು ಜನ ಸಾಮಾನ್ಯರ ನೋವೇ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಆಪ್ ಕೇರ್ ಅಭಿಯಾನ ಕೈಗೊಳ್ಳಲು ಸ್ಪೂರ್ತಿ. ಯಶಸ್ವಿ 25 ದಿನಗಳನ್ನು ಸದ್ದಿಲ್ಲದೇ ಪೂರೈಸಿರುವ ಈ ಕಾರ್ಯಕ್ರಮದ ಮೂಲಕ ಇದುವರೆಗೂ ಸುಮಾರು 67 ಸಾವಿರಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ, ಸೋಂಕು ತಗುಲುವ ಆತಂಕದಲ್ಲಿದ್ದ ಜನರನ್ನು ಆಪ್ತ ಸಮಾಲೋಚನೆ ಮಾಡಿ ಭಯದಿಂದ ಹೊರತರಲಾಗಿದೆ.

ಸರ್ಕಾರ ಜನರ ಕೈಬಿಡುವುದಿಲ್ಲ ಎಂದು ನಂಬಿದ್ದ ಜನ ಭಯಭೀತರಾಗಿ ಊರು ತೊರೆಯಲು ಪ್ರಾರಂಭಿಸಿದರು, ಆದರೂ ಏನೂ ಮಾಡದೇ ಕಟ್ಟಿ ಕುಳಿತುಕೊಂಡಿತ್ತು ನಮ್ಮ ರಾಜ್ಯ ಬಿಜೆಪಿ ಸರ್ಕಾರ. ಇಂತಹ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ ಇಂತಹ ಜನಪರ ಕಾರ್ಯಕ್ರಮ ಹಾಕಿಕೊಂಡು ಜನರ ಕೈ ಹಿಡಿದಿದೆ.

ಇಡೀ ದೇಶದಲ್ಲೆ ಕೊರೋನಾ ಸೋಂಕಿನಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದು ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯಲ್ಲಿ. ಇಡೀ ದೇಶವೇ ಕರ್ನಾಟಕದ ಕಡೆ ತಿರುಗಿ ನೋಡುವಂತಾಯಿತು, ಆಗ ಕೊರೋನಾ ಸೋಂಕಿತರ ಪಟ್ಟಿಯಲ್ಲಿ ರಾಜ್ಯ ಇದ್ದದ್ದು 11ನೇ ಸ್ಥಾನದಲ್ಲಿ. ಈ ವಿಷಯವನ್ನು ಮೊದ‌ ಮೊದಲು ಗಂಭೀರವಾಗಿ ಪರಿಗಣಿಸಿದ ಸರ್ಕಾರ ದಿನಕಳೆದಂತೆ ತನ್ನ ಜವಾಬ್ದಾರಿಯನ್ನೇ ಮರೆತು ಕುಳಿತಿತು. ಇದರ ಪರಿಣಾಮ 4ನೇ ಸ್ಥಾನಕ್ಕೇರಿದ ಕರ್ನಾಟಕದಲ್ಲಿ ಪರಿಸ್ಥಿತಿ ಕೈಗೆ ಸಿಗದ ಪರಿಣಾಮ ಜನ ಬೀದಿ, ಬೀದಿಯಲ್ಲಿ ಸಾಯಲು ಪ್ರಾರಂಭಿಸಿದರು.‌ ಹಾಸಿಗೆ, ಔಷಧಿ, ಊಟ, ವೈದ್ಯರು, ವೆಂಟಿಲೇಟರ್ ಗಳು ಏನೇನೂ ಸರಿಯಾಗಿ ದೊರೆಯದ ಜಂಗಲ್ ರಾಜ್ಯ ಎನ್ನುವಷ್ಟರ ಮಟ್ಟಿಗೆ ಕರ್ನಾಟಕದ ಪರಿಸ್ಥಿತಿ ಹದಗೆಟ್ಟು ಹೋಯಿತು.

ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಏನೆಂದರೆ ಮನೆಯಲ್ಲಿಯೇ ಕ್ವಾರಂಟೈನ್ ಆದ ಸೋಂಕಿತರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದು. ಎಲ್ಲಾ ಸೋಂಕಿತರು ಆಸ್ಪತ್ರೆಗೆ ಬರುವುದು ಬೇಡ ಎಂದು ದಿನಕ್ಕೊಂದು ಕಾನೂನು ಬದಲಾಯಿಸುತ್ತಿದ್ದ ಸರ್ಕಾರ ಮನೆಯಲ್ಲೇ ಇದ್ದ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಹಾಗೂ ಸೋಂಕಿನ ಬಗ್ಗೆ ನಿಖರ ಮಾಹಿತಿ ನೀಡದೇ ಸರ್ಕಾರಿ ಪ್ರಾಯೋಜಿತ ಕೊಲೆ ಮಾಡಿತು ಎಂದೇ ಹೇಳಬಹುದು.

“ಆಪ್ ಕೇರ್ ಅಭಿಯಾನ ಜನರ ಆರೋಗ್ಯದ ಬಗ್ಗೆ ಮುತುವರ್ಜಿ ಹಾಗೂ ಸರ್ಕಾರದ ವಿರುದ್ದ ವಿನೂತನ ಪ್ರತಿಭಟನೆ”

ಬೆಂಗಳೂರು ನಗರ ಒಂದರಲ್ಲೇ ಅತಿ ಹೆಚ್ಚು ಸೋಂಕಿತರು ಕಂಡು ಬಂದರೂ ಕೇವಲ ಮೊಸಳೆ ಕಣ್ಣೀರಿನ ಮಾತುಗಳನ್ನಾಡಿ ಕನಿಷ್ಠ ಸೌಲಭ್ಯವನ್ನೂ ಒದಗಿಸದ ಸರ್ಕಾರದ ವಿರುದ್ದ ಆಮ್ ಆದ್ಮಿ ಪಕ್ಷ ಮಾಡುತ್ತಿರುವ ವಿನೂತನ ಪ್ರತಿಭಟನೆ ಇದಾಗಿದೆ. ಆದರೆ ಇಲ್ಲಿ ಪ್ರತಿಭಟನೆಯ ಸ್ವರೂಪ ಬೇರೆ. ಅಂದರೆ ಸರ್ಕಾರ ನಿರ್ಲಕ್ಷ್ಯ ಮಾಡಿರುವ ಸೋಂಕಿತರು ಹೆಚ್ಚು ಕಂಡು ಬಂದ ಪ್ರದೇಶಕ್ಕೆ ತೆರಳಿ ಅಲ್ಲಿನ ನಿವಾಸಿಗಳ ದೇಹದ ಉಷ್ಣತೆ, ಪಲ್ಸ್ ಆಕ್ಸಿ ಮೀಟರ್ ಮೂಲಕ ದೇಹದ ಆಮ್ಲಜನಕ ಮಟ್ಟ ಪರೀಕ್ಷಿಸಲಾಗುವುದು, ಇಡೀ ಪ್ರದೇಶವನ್ನೇ ಸ್ಯಾನಿಟೈಜೇಷನ್ ಮಾಡುವ ಹಾಗೂ ಸೋಂಕಿತರು ಕಂಡು ಬಂದಲ್ಲಿ ಅವರಿಗೆ ನಿಖರ ಮಾಹಿತಿ ಹಾಗೂ ಗುಣಮುಖರಾಗುವ ತನಕ ಪ್ರತಿ ಹಂತದಲ್ಲೂ ನಿಗಾ ವಹಿಸಲಾಗುವುದು. 10 ಸಾವಿರ ಮಾಸ್ಕ್ ವಿತರಿಸುವುದರ ಜತೆಗೆ ಪ್ರತಿ ಮನೆಗೆ ಭೇಟಿ ನೀಡಿ ಸ್ಥಳೀಯ ಫೀವರ್ ಕ್ಲಿನಿಕ್ ಹಾಗೂ ಕೋವಿಡ್ ಹಾರೈಕೆ ಕೇಂದ್ರಗಳ ಮಾಹಿತಿ ಇರುವ ಕರಪತ್ರ ನೀಡಲಾಗುವುದು.

ಆಪ್ ಕೇರ್ ಅಭಿಯಾನ ಮೊದಲ ಹಂತವಾಗಿ ಬೆಂಗಳೂರಿನ 50 ವಾರ್ಡ್‌ಗಳಲ್ಲಿ ನಡೆಯುತ್ತಿದೆ. ಈ ಅಭಿಯಾನಕ್ಕೆ ಸಾಕಷ್ಟು ಜನ ಬೆಂಬಲ ವ್ಯಕ್ತವಾಗಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಅಭಿಯಾನದ ಉದ್ದೇಶ ನೋಡಿದ ಬೇರೆ ಪಕ್ಷಗಳ ಮುಖಂಡರು ಪ್ರೇರಿತರಾಗಿ ಆಮ್ ಆದ್ಮಿ ಪಕ್ಷದ ಜತೆ ಕೈ ಜೋಡಿಸಿದ್ದು ವಿಶೇಷವಾಗಿತ್ತು.
ಮೊದಲ ಹಂತ ಮುಗಿದ ನಂತರ ಎಲ್ಲಾ ವಾರ್ಡ್ ಹಾಗೂ ಎಲ್ಲಾ ಗ್ರಾಮಾಂತರ ಪ್ರದೇಶಗಳಿಗೂ ಈ ಅಭಿಯಾನ ವಿಸ್ತರಿಸಲಾಗುವುದು. ಆಗಸ್ಟ್‌ ತಿಂಗಳ ಒಳಗೆ ಈ ಅಭಿಯಾನದ ಪ್ರಯೋಜನ ಎಲ್ಲರಿಗೂ ತಲುಪಿಸುವ ಉದ್ದೇಶ ಹೊಂದಲಾಗಿದೆ.

4 ಸಾವಿರ ಕೋಟಿಗಳಷ್ಟು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಗೋಲ್ ಮಾಲ್ ಮಾಡಿದ ಯಡಿಯೂರಪ್ಪ ಅವರ ಸರ್ಕಾರ ದಿನದಿಂದ ದಿನಕ್ಕೆ ಸೋಂಕಿತರ ಪ್ರದೇಶದ ಬಗೆಗಿನ ಕಾಳಜಿಯನ್ನೇ ಮರೆಯಿತು. ಇದರ ನಡುವೆ ಸರ್ಕಾರದ ಮುಖಂಡರುಗಳ ಬೇಜವಾಬ್ದಾರಿ ಹೇಳಿಕೆಗಳಿಂದ ಜನ ಸಾಮಾನ್ಯರ ಗೋಳು ಕೇಳದಂತಹ ವಿಚಿತ್ರ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿದ್ದು ನಿಜಕ್ಕೂ ದುರಂತಮಯ ಸಂಗತಿ.

ದೇವರೇ ಕಾಪಾಡಬೇಕು ಎಂದಿದ್ದ ಆರೋಗ್ಯ ಸಚಿವರನ್ನೇ ಬಿಡದ ಕೊರೋನಾ ಸೋಂಕು ನಮ್ಮ ರಾಜಕಾರಣಿಗಳಿಗೆ ಕಿಂಚಿತ್ತಾದರೂ ಮಾನವೀಯತೆ ಕಲಿಸಿಕೊಡುತ್ತದೆ ಎಂದು ನಂಬಿದ್ದೂ ಸಹ ಸುಳ್ಳಾಗುವಷ್ಟರ ಮಟ್ಟಿಗೆ ನಮ್ಮ ಜನಪ್ರತಿನಿಧಿಗಳು ನಡೆದುಕೊಂಡರು.

ದೆಹಲಿ ಮಾದರಿ ಇಡೀ ದೇಶಕ್ಕೆ ಸ್ಪೂರ್ತಿ

ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದ್ದರೂ ಸಹ ವಿಚಲಿತಗೊಳ್ಳದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಇಡೀ ದೆಹಲಿಯ ಜನತೆ ಭಯ ಪಡದಂತೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡಿತು. ಅಲ್ಲದೇ ಇಡೀ ದೇಶದಲ್ಲಿಯೇ ಅತಿ ದೊಡ್ಡ 10 ಸಾವಿರ ಹಾಸಿಗೆ ಹೊಂದಿರುವ ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆ, ಹೋಮ್ ಕ್ವಾರಂಟೈನ್ ಆದವರು ತಮ್ಮ ಆರೋಗ್ಯದ ಮೇಲೆ ನಿಗಾವಹಿಸಲು ಪಲ್ಸ್ ಆಕ್ಸಿ ಮೀಟರ್ ಸೇರಿದಂತೆ ವೈದ್ಯಕೀಯ ಕಿಟ್ ನೀಡಿದ್ದು ಸೇರಿದಂತೆ ಉದ್ಯೋಗ ಕಳೆದುಕೊಂಡ ಆಟೊ, ಕ್ಯಾಬ್ ಚಾಲಕರಿಗೆ 5 ಸಾವಿರ ಸಹಾಯಧನ ನೀಡಿದ್ದು ಸೇರಿ ಅನೇಕ ಕ್ರಾಂತಿಕಾರಕ ನಿರ್ಣಯಗಳನ್ನು ತೆಗೆದುಕೊಂಡಿದ್ದು ನಿಜಕ್ಕೂ ಉತ್ತಮ ಜನಪರವಾಗಿ ಕೆಲಸ ಮಾಡುವ ಸರ್ಕಾರದ ಗುಣ ಎಂದು ಆಮ್ ಆದ್ಮಿ ಪಕ್ಷ, ಬೆಂಗಳೂರು ಇದರ ಮಾಧ್ಯಮ ಸಂಯೋಜಕ ಸೋಮಶೇಖರ್ ಸಿರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group