ವಿದೇಶ ಸುದ್ದಿ

ದಕ್ಷಿಣ ಸ್ವೀಡನ್‌ ಮಾಲ್ಮೊ; ಬಲಪಂಥೀಯ ಗುಂಪಿನಿಂದ ಕುರಾನ್ ಪ್ರತಿಗೆ ಬೆಂಕಿ: ಛೀಮಾರಿ ಹಾಕಿದ ವಿಶ್ವ ಸಂಸ್ಥೆ

ವರದಿಗಾರ (ಆ.30): ದಕ್ಷಿಣ ಸ್ವೀಡನ್‌ ಮಾಲ್ಮೊ ನಗರದಲ್ಲಿ ಬಲಪಂಥೀಯ ಗುಂಪೊಂದು ಪವಿತ್ರ ಗ್ರಂಥ ಕುರಾನ್ ಪ್ರತಿಯನ್ನು ಸುಟ್ಟುಹಾಕಿದ ಘಟನೆ ಶುಕ್ರವಾರ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯನ್ನು ಬಂಧಿಸಲಾಗಿದೆ. ಈ ಘಟನೆಯನ್ನು ವಿಶ್ವಸಂಸ್ಥೆ ತೀವ್ರವಾಗಿ ಖಂಡಿಸಿದೆ.

ಮಾಲ್ಮೋದಲ್ಲಿ ಉಂಟಾದ ಹಿಂಸಾಚಾರ ಮತ್ತು ಕಲ್ಲೆಸೆತದಿಂದ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದು, ಟಯರ್‌ಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರೋಸೆನ್‌ಗಾರ್ಡ್‌ನಲ್ಲಿ ಶುಕ್ರವಾರ ಸುಮಾರು 300 ಜನರು ಪ್ರತಿಭಟನಾ ಪ್ರದರ್ಶನ, ರಾಲಿ ಏರ್ಪಡಿಸಿದ್ದರು. ಹೆಚ್ಚಾಗಿ ವಲಸೆ ಬಂದವರೇ ಇರುವ ರೋಸೆನ್‌ ಗಾರ್ಡ್‌ನಲ್ಲಿ ಪವಿತ್ರ ಕುರಾನ್ ಪ್ರತಿಯನ್ನು ಬಲಪಂಥೀಯ ಕಾರ್ಯಕರ್ತರು ಸುಟ್ಟುಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಮುಸ್ಲಿಂ ವಿರೋಧಿ ಡ್ಯಾನಿಶ್ ರಾಜಕಾರಣಿ ರಾಸ್ಮಸ್ ಪಲುಡಾನ್ ಆ ರಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿತ್ತು, ಆದರೆ ಸ್ವೀಡಿಷ್-ಡ್ಯಾನಿಶ್ ಗಡಿಯಲ್ಲಿ ಪೊಲೀಸರು ಅವರನ್ನು ತಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ವೀಡನ್ ದೇಶದ ನಗರ ಮಲ್ಮೋದಲ್ಲಿ ಬಲಪಂಥೀಯ ತೀವ್ರವಾದಿಗಳು ಮುಸ್ಲಿಮರ ಪವಿತ್ರ ಗ್ರಂಥ  ಕುರಾನ್ ದಹಿಸಿರುವುದನ್ನು ವಿಶ್ವಸಂಸ್ಥೆಯ ನಾಗರೀಕತೆಗಳ ಒಕ್ಕೂಟದ  ಮುಖ್ಯಸ್ಥ ಮಿಗುಯೆಲ್ ಮೊರಟಿನೋಸ್ ತೀವ್ರವಾಗಿ ಖಂಡಿಸಿದ್ದಾರೆ.

ಮಾಲ್ಮೋದಲ್ಲಿ ಗಲಭೆಗೆ ಕಾರಣವಾಗಿರುವ ಶುಕ್ರವಾರ ನಡೆದ ಈ ಘಟನೆ ಪರಮ ನೀಚ ಕೃತ್ಯವಾಗಿದ್ದು, ಯಾರೂ ಒಪ್ಪುವಂತದ್ದಲ್ಲ ಅಥವಾ ಸಮರ್ಥನೀಯವಲ್ಲ ಎಂದು ಮಿಗುಯೆಲ್ ಮೊರಟಿನೋಸ್ ಅವರ ವಕ್ತಾರ ನಿಹಾಲ್ ಸಾದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಲಪಂಥೀಯ ಉಗ್ರಗಾಮಿಗಳು ಹಾಗೂ ಇತರ ಮೂಲಭೂತವಾದಿ ಗುಂಪುಗಳು ನಡೆಸುವ ಇಂತಹ  ಕೃತ್ಯಗಳು ಹಿಂಸಾಚಾರವನ್ನು ಪ್ರಚೋದಿಸಿ, ಸಮುದಾಯಗಳ ನಡುವಣ ಸೌಹಾರ್ದತೆಯನ್ನು ಹಾಳು ಗೆಡವುತ್ತವೆ ಎಂದು ಎಂದು ಮೊರಟಿನೋಸ್  ಹೇಳಿದ್ದಾರೆ.

ಈ ಕೃತ್ಯಗಳು ವಿಶ್ವಸಂಸ್ಥೆಯ ನಾಗರೀಕತೆ ಒಕ್ಕೂಟ ಪ್ರತಿಪಾದಿಸುವ ಉದ್ದೇಶಗಳು ಮತ್ತು ಮೌಲ್ಯಗಳಿಗೆ ಧಕ್ಕೆ ತಂದಿದ್ದು, ಪರಸ್ಪರ ಗೌರವ ಮತ್ತು ತಿಳುವಳಿಕೆಯನ್ನು ಉತ್ತೇಜಿಸುವ, ಅಂತರ ಸಂಸ್ಕೃತಿ ಹಾಗೂ ಅಂತರ ಧರ್ಮೀಯ ಸಂವಾದವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ನಾಗರಿಕತೆಗಳ ಒಕ್ಕೂಟ ಈ  ಕೃತ್ಯವನ್ನು ಖಂಡಿಸುತ್ತದೆ ಎಂದು ಹೇಳಿದೆ.  ಪವಿತ್ರ ಗ್ರಂಥಗಳು, ಪೂಜಾ ಸ್ಥಳಗಳು ಹಾಗೂ ಧಾರ್ಮಿಕ ಸಂಕೇತಗಳನ್ನು ಅಪವಿತ್ರಗೊಳಿಸುವ ಇಂತಹ  ಕೃತ್ಯಗಳನ್ನು ಎಲ್ಲಾ  ಧಾರ್ಮೀಕ ನಾಯಕರು ತೀವ್ರವಾಗಿ ನಿರಾಕರಿಸಬೇಕು ಎಂದು ಮೊರಟಿನೋಸ್ ಪುನರುಚ್ಚರಿಸಿದ್ದಾರೆ. ಧರ್ಮ ಅಥವಾ ನಂಬಿಕೆಯ ಆಧಾರದ ಮೇಲೆ ನಡೆಯುವ  ಇಂತಹ ಎಲ್ಲ ಹಿಂಸಾಚಾರಗಳನ್ನು ಖಂಡಿಸಬೇಕು ಎಂದು ಅವರು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group