ರಾಷ್ಟ್ರೀಯ ಸುದ್ದಿ

20 ಲಕ್ಷ ಜನರಿಗೆ ಉದ್ಯೋಗ ನೀಡುವ ಯೋಗಿ ಸರಕಾರದ ಯೋಜನೆಯ ಸತ್ಯಾಸತ್ಯತೆ!

ದಾಖಲೆಗಳಲ್ಲಿ ಮಾತ್ರ ಉದ್ಯೋಗ, ನಿರುದ್ಯೋಗಿಗಳಿಂದ ಹಣ ದೋಚುತ್ತಿರುವ ಖಾಸಗಿ ಸಂಸ್ಥೆಗಳು!

ವರದಿಗಾರ (ಆ.29): ಉತ್ತರ ಪ್ರದೇಶದಲ್ಲಿ ಉದ್ಯೋಗ ಕೊಡುವ ಹೆಸರಿನಲ್ಲಿ ಖಾಸಗಿ ಕಂಪನಿಗಳು ನಿರುದ್ಯೋಗಿಗಳಿಂದ ಹಣ ವಸೂಲಿ ದಂಧೆಗಿಳಿದಿರುವುದು ಬೆಳಕಿಗೆ ಬಂದಿದೆ.

ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡ ಲಕ್ಷಾಂತರ ಯುವಕರು ನೌಕರಿಗಾಗಿ ಹಾತೊರೆಯುತ್ತಿದ್ದಾರೆ. ಉತ್ತರ ಪ್ರದೇಶ ಸರ್ಕಾರ 20 ಲಕ್ಷ ಉದ್ಯೋಗ ಕೊಡುವುದಾಗಿ ಹೇಳಿದ್ದು, ಇದಕ್ಕಾಗಿ ಕೆಲವು ಖಾಸಗಿ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಿದೆ. ಆದರೆ ಈ ಖಾಸಗಿ ಕಂಪನಿಗಳು ನಿರುದ್ಯೋಗಿಗಳ ಅಸಹಾಯಕತೆಯನ್ನೇ ದುರುಪಯೋಗಪಡಿಸಿಕೊಂಡು ಅವರಿಂದ ತರಬೇತಿ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿವೆ.

ಖಾಸಗಿ ಸಂಸ್ಥೆಗಳಲ್ಲಿ ಭದ್ರತಾ ಸಿಬ್ಬಂದಿ ಹುದ್ದೆ ನೀಡುವುದಾಗಿ ಹೇಳಿ ವಂಚಿಸಲಾಗುತ್ತಿದೆ. ಮಾತ್ರವಲ್ಲ ಈಗಾಗಲೇ ಉದ್ಯೋಗವಿಲ್ಲದೆ ಸಂಕಷ್ಟದಲ್ಲಿರುವ ಯುವಕರಿಂದ ದುಬಾರಿ ಶುಲ್ಕ ವಸೂಲಿ ಮಾಡುವ ದಂಧೆಗೆ ಇಳಿದಿದೆ.

ಉತ್ತರ ಪ್ರದೇಶದ ಹಾಪುರದಲ್ಲಿ ಖಾಸಗಿ ಕಂಪನಿಯೊಂದು ಭದ್ರತಾ ಸಿಬ್ಬಂದಿ  ಹುದ್ದೆ ನೀಡುವುದಾಗಿ ಅರ್ಜಿ ಆಹ್ವಾನಿಸಿದೆ. ನೂರಾರು ಯುವಕರು ಅರ್ಜಿ ಸಲ್ಲಿಸಿದ್ದಾರೆ. ವಿವಿಧ ಪದವೀಧರರು ಕೂಡ ಅರ್ಜಿ ಸಲ್ಲಿಸಿದ್ದಾರೆ. ಈ  ಖಾಸಗಿ ಕಂಪನಿಯು 3 ತಿಂಗಳು ಡೆಹ್ರಾಡೂನ್‌ನಲ್ಲಿ ತರಬೇತಿ ನೀಡುವುದಾಗಿ ಹೇಳಿ ಆಕಾಂಕ್ಷಿಗಳಿಂದ 10ರಿಂದ 40 ಸಾವಿರ ರೂಪಾಯಿವರೆಗೆ ಶುಲ್ಕವಾಗಿ ವಸೂಲಿ ಮಾಡುತ್ತಿದೆ. ತರಬೇತಿಯ ಹೆಸರಿನಲ್ಲಿ  ಇಷ್ಟೊಂದು ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಸಂಸ್ಥೆಯ ವಿರುದ್ಧ ನಿರುದ್ಯೋಗಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಹೆಚ್ಚಿನ ಯುವಕರು ಇಷ್ಟೊಂದು ಪ್ರಮಾಣದ ಶುಲ್ಕ ಪಾವತಿಸಲಾಗದೆ ಹೊರಟು ಹೋಗಿದ್ದಾರೆ.

ವೀಡಿಯೋ ವೀಕ್ಷಿಸಿ:

ಶಹರನ್‌ಪುರದಲ್ಲಿಯೂ ಖಾಸಗಿ ಕಂಪನಿ ಉದ್ಯೋಗ ನೀಡುವ ಶಿಬಿರ ಏರ್ಪಡಿಸಿದೆ. ಹೈಸ್ಕೂಲ್ ಉತ್ತೀರ್ಣ ಅಥವಾ ಅನುತ್ತೀರ್ಣ ಎಂದು ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದರೂ ಇಲ್ಲಿ ಹಣವೇ ಮುಖ್ಯವಾಗಿದೆ. ಬಿ.ಟೆಕ್‌ ಪದವೀಧರೊಬ್ಬರು ಹಣ ಪಾವತಿಸಿದ್ದರೂ ಕೇವಲ ದಾಖಲೆಯಲ್ಲಿ ಮಾತ್ರ ಉದ್ಯೋಗ ನೀಡಲಾಗಿದೆ. ವಾಸ್ತವವಾಗಿ ಅವರಿಗೆ ಇದುವರೆಗೆ ಉದ್ಯೋಗ ದೊರಕಿಲ್ಲ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸೇವಾ ಯೋಜನೆಯಡಿ ದಾಖಲಾದ ನಿರುದ್ಯೋಗಿಗಳ ಮಾಹಿತಿಯನ್ನು ಪಡೆದು ನಿರುದ್ಯೋಗಿಗಳನ್ನು ವಂಚಿಸಲು ಖಾಸಗಿ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟ ಸರ್ಕಾರವೇ ನೇರವಾಗಿ ತಪ್ಪಿತಸ್ಥ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ವರದಿ ಕೃಪೆ: ಎನ್.ಡಿ.ಟಿ.ವಿ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group