ಉತ್ತರ ಪ್ರದೇಶ: ಲಕ್ನೋದಲ್ಲಿ ರೈಲ್ವೆ ಅಧಿಕಾರಿಯ ಪತ್ನಿ, ಮಗನ ಬರ್ಬರ ಹತ್ಯೆ; ಬೆಚ್ಚಿಬಿದ್ದ ರಾಜಧಾನಿ

ವರದಿಗಾರ (ಆ.29): ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಅತಿ ಗಣ್ಯ ವ್ಯಕ್ತಿಗಳು ನೆಲೆಸುವ ಪ್ರದೇಶದಲ್ಲಿ ತಾಯಿ ಮತ್ತು ಮಗನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ.
ರೈಲ್ವೆ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕರ ಪತ್ನಿ ಮತ್ತು ಮಗನನ್ನು ಅಪರಿಚಿತ ದುಷ್ಕರ್ಮಿಗಳು ಅತಿ ಬಿಗಿ ಭದ್ರತೆಯ ಲಕ್ನೋದ ಗೌತಂಪಳ್ಳಿ ಪ್ರದೇಶದ ಅವರ ನಿವಾಸದಲ್ಲಿ ಶನಿವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಮೃತರನ್ನು ಮಾಲತಿ (48) ಮತ್ತು ಅವರ ಪುತ್ರ ಶರತ್ (19) ಎಂದು ಗುರುತಿಸಲಾಗಿದೆ.
ರೈಲ್ವೆ ಕಾಲೋನಿಯಲ್ಲಿರುವ ಘಟನಾ ಸ್ಥಳಕ್ಕೆ ಪೊಲೀಸರು ತಲುಪಿದಾಗ ತಾಯಿ ಮತ್ತು ಮಗನ ಮೃತದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ಲಕ್ನೋ ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ತಿಳಿಸಿದ್ದಾರೆ.
ರೈಲ್ವೆ ಕಾಲೋನಿ ಮುಖ್ಯಮಂತ್ರಿಯ ಅಧಿಕೃತ ನಿವಾಸದಿಂದ ಸಮೀಪದಲ್ಲೇ ಇದ್ದು, ಇಡೀ ಪ್ರದೇಶವು ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿದೆ. ಮೇಲ್ನೋಟಕ್ಕೆ ಇದು ದರೋಡೆ ಅಥವಾ ಕಳ್ಳತನದ ಪ್ರಕರಣವೆಂದು ತೋರುತ್ತಿಲ್ಲ. ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿ ಮಾದರಿ ಸಂಗ್ರಹಿಸಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉತ್ತರ ಪ್ರದೇಶದಲ್ಲಿ ಅಪರಾಧ ಕೃತ್ಯಗಳು ಗಣನೀಯ ಸಂಖ್ಯೆಯಲ್ಲಿ ಹೆಚ್ಚಾಗಿರುವುದನ್ನು ನ್ಯಾಷನಲ್ ಕ್ರೈಂ ಬ್ಯೂರೋ ಅಂಕಿಅಂಶಗಳು ತಿಳಿಸಿವೆ.
