ರಾಷ್ಟ್ರೀಯ ಸುದ್ದಿ

ಸಾಲಗಾರರ ಸಂಕಷ್ಟಕ್ಕೆ ಸ್ಪಂದಿಸಿ; ಕೇಂದ್ರ ಸರಕಾರದ ಕಿವಿ ಹಿಂಡಿದ ಸುಪ್ರೀಂ ಕೋರ್ಟ್

ಸಾಲ ಮರುಪಾವತಿ ಮುಂದೂಡಿಕೆ ಅವಧಿಯ ಬಡ್ಡಿ: ಕೇಂದ್ರಕ್ಕೆ ‘ಸುಪ್ರೀಂ’ ತರಾಟೆ

ವರದಿಗಾರ (ಆ.29): ಬ್ಯಾಂಕ್ ಸಾಲ ಮರು ಪಾವತಿ ಮುಂದೂಡಿಕೆ ಅವಧಿಯ ಬಡ್ಡಿ ಮನ್ನಾ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದ ಕೇಂದ್ರ ಸರಕಾರವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತರಾಟೆಗೆತ್ತಿಕೊಂಡಿದೆ. ವ್ಯಾಪಾರ ಮತ್ತು ಬ್ಯಾಂಕುಗಳ ಹಿತಾಸಕ್ತಿಯನ್ನಷ್ಟೇ ನೋಡಿಕೊಂಡರೆ ಸಾಲದು, ಜನರ ಸಂಕಷ್ಟವನ್ನೂ ಗಣನೆಗೆ ತೆಗೆದುಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ.

ಕೋವಿಡ್ ನ ಲಾಕ್ ಡೌನ್ ಸಂದರ್ಭದಲ್ಲಿ ಮುಂದೂಡಲಾದ ಸಾಲ ಮರುಪಾವತಿ ಅವಧಿಗೆ ಬಡ್ಡಿ ಮನ್ನಾ ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸರಕಾರವನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆತ್ತಿಕೊಂಡಿದೆ.

ಬಡ್ಡಿ ಮನ್ನಾ ಮಾಡುವುದಕ್ಕೆ ಸಂಬಂಧಿಸಿ ಸರಕಾರವು ಭಾರತೀಯ ರಿಸರ್ವ್ ಬ್ಯಾಂಕಿನ ಹಿಂದೆ ಅವಿತುಕೊಳ್ಳಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ಎಚ್ಚರಿಕೆಯನ್ನೂ ನೀಡಿದೆ. ಸರಕಾರ ಹೇರಿದ್ದ ಲಾಕ್ ಡೌನ್ ನಿಂದಾಗಿಯೇ ಈಗಿನ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಲ ಮರುಪಾವತಿ ಮೂಂದೂಡಿರುವ ಆರು ತಿಂಗಳ ಬಡ್ಡಿ ಮತ್ತು ಬಡ್ಡಿಯ ಮೇಲಿನ ಬಡ್ಡಿ ವಿಚಾರದಲ್ಲಿ ಸ್ಪಷ್ಟ ನಿಲುವು ಪ್ರಕಟಿಸಬೇಕೆಂದು ನ್ಯಾಯಮೂರ್ತಿ ಅಶೋಕ್ ಭೂಷನ್ ನೇತೃತ್ವದ ಪೀಠವು ಸೂಚಿಸಿದೆ.

ಬಡ್ಡಿ ಮನ್ನಾ ವಿಚಾರದಲ್ಲಿ ನಾವು ನಿಸ್ಸಾಹಾಯಕರು ಎಂದು ಕೇಂದ್ರ ಸರಕಾರ ಹೇಳಬಾರದೆಂದು ಸು.ಕೋ. ಹೇಳಿದೆ. ಇದು ಬ್ಯಾಂಕ್ ಮತ್ತು ಗ್ರಾಹಕರ ನಡುವಿನ ವಿಚಾರ ಎಂದೂ ಹೇಳುವಂತಿಲ್ಲ. ಮರುಪಾವತಿ ಮುಂದೂಡಿಕೆಯನ್ನು ಕೇಂದ್ರವೇ ಘೋಷಿಸಿರುವುದರಿಂದ ಅದರ ಪ್ರಯೋಗವು ಗ್ರಾಹಕರಿಗೆ ಸಿಗುವಂತೆ ನೋಡಿಕೊಳ್ಳಬೇಕೆಂದು ಈ ಮೊದಲಿನ ವಿಚಾರಣೆಯ ಸಂದರ್ಭ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಕೋವಿಡ್ ಹರಡುವಿಕೆಯ ತಡೆಗಾಗಿ ದೇಶವ್ಯಾಪಿ ಲಾಕ್ ಡೌನ್ ಹೇರಿದ್ದ ಕಾರಣದಿಂದ ಸಾಲ ಮರುಪಾವತಿಯನ್ನು 3 ತಿಂಗಳು ಮುಂದೂಡಿ ಮಾರ್ಚ್ 27ರಂದು ಆರ್ ಬಿಐ ಸುತ್ತೋಲೆ ಹೊರಡಿಸಿತ್ತು. ಬಳಿಕ ಈ ಅವಧಿಯನ್ನು ಆಗಸ್ಟ್ 31ರ ವರೆಗೆ ವಿಸ್ತರಿಸಲಾಗಿದೆ.

ವಿಸ್ತರಣೆಗೆ ಕೋರಿಕೆ:

ಸಾಲ ಮರುಪಾವತಿ ಮುಂದೂಡಿಕೆ ಅವಧಿಯು ಆಗಸ್ಟ್ 31 ರಂದು ಕೊನೆಗೊಳ್ಳುತ್ತದೆ. ಈ ಅವಧಿಯನ್ನು ಮತ್ತಷ್ಟು ವಿಸ್ತರಿಸಬೇಕೆಂದು ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ಸು.ಕೋ. ನ್ನು ಕೋರಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group