ರಾಷ್ಟ್ರೀಯ ಸುದ್ದಿ

ಬಿಜೆಪಿ ಆಹ್ವಾನ ತಿರಸ್ಕರಿಸಿದ ಅಣ್ಣಾ ಹಜಾರೆ; ಬಿಜೆಪಿಗೆ ಮುಖಭಂಗ!

‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೊಂದು ತಮ್ಮ ಸಹಾಯ ಕೋರಿರುವುದು ದುರದೃಷ್ಟಕರ’

ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ 10 × 12 ಅಡಿ ಕೋಣೆಯಲ್ಲಿ ವಾಸಿಸುವ 83 ವರ್ಷದ ಫಕೀರ್‌ನನ್ನು ಕರೆಯುತ್ತಿದೆ; ಹಜಾರೆ ವ್ಯಂಗ್ಯ

ವರದಿಗಾರ (ಆ.29): ದೆಹಲಿಯ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ದೆಹಲಿ ಬಿಜೆಪಿ ನೀಡಿದ್ದ ಆಹ್ವಾನವನ್ನು ನಯವಾಗಿ ತಿರಸ್ಕರಿಸಿರುವ ಭ್ರಷ್ಟಾಚಾರ ವಿರೋಧಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೊಂದು ತಮ್ಮ ಸಹಾಯ ಕೋರಿರುವುದು ದುರದೃಷ್ಟಕರ ಎಂದು ಟೀಕಿಸಿದ್ದಾರೆ.

ಈ ಸಂಬಂಧ ಬಿಜೆಪಿಯ ದೆಹಲಿ ಅಧ್ಯಕ್ಷ ಆದೇಶ್ ಗುಪ್ತಾ ಅವರಿಗೆ ಬರೆದ ಪತ್ರದಲ್ಲಿ ಹಜಾರೆ, ತಾವು ದೆಹಲಿಗೆ ಹೋಗುವುದರಿಂದ ಯಾವುದೇ ಹೆಚ್ಚಿನ ವ್ಯತ್ಯಾಸವಾಗಲಾರದು. ಯಾಕೆಂದರೆ ಯಾವುದೇ ರಾಜಕೀಯ ಪಕ್ಷವು ದೇಶಕ್ಕೆ ಉಜ್ವಲ ಭವಿಷ್ಯ ನೀಡುತ್ತದೆ ಎಂಬ ನಂಬಿಕೆ ತಮಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನಿಮ್ಮ ಪತ್ರವನ್ನು ಓದಿದಾಗ ನನಗೆ ವಿಷಾದವೆನಿಸಿತು. ನಿಮ್ಮ ಬಿಜೆಪಿ ಪಕ್ಷ ಕಳೆದ ಆರು ವರ್ಷಗಳಿಂದ ಅಧಿಕಾರದಲ್ಲಿದೆ. ಯುವಕರು ದೇಶದ ಆಸ್ತಿ ಮತ್ತು ನಿಮ್ಮ ಪಕ್ಷವು ಹೆಚ್ಚಿನ ಸಂಖ್ಯೆಯಲ್ಲಿ ಅವರ ಬೆಂಬಲವನ್ನು ಹೊಂದಿದೆ. ಇನ್ನೂ ಅದು 10 × 12 ಅಡಿ ಕೋಣೆಯಲ್ಲಿ ವಾಸಿಸುವ 83 ವರ್ಷದ ಫಕೀರ್‌ನನ್ನು ಕರೆಯುತ್ತಿದೆ, ಅವರಿಗೆ ಸಂಪತ್ತು ಇಲ್ಲ, ಅಧಿಕಾರವಿಲ್ಲ, “ಇದಕ್ಕಿಂತ ಹೆಚ್ಚು ದುರದೃಷ್ಟಕರ ಯಾವುದು?”ಎಂದು ಹಜಾರೆ ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಮಾತ್ರವಲ್ಲ ಈ ಪತ್ರವನ್ನು ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆಗೆ ಕೇಂದ್ರವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿ ಸರ್ಕಾರವು ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ನಿಮ್ಮ ಸರ್ಕಾರ ಏಕೆ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ? ” ಎಂದು ಹಜಾರೆ ಪ್ರಶ್ನಿಸಿದ್ದಾರೆ.

2011ರಲ್ಲಿ ದೆಹಲಿಯಲ್ಲಿ ಹಜಾರೆ ಭ್ರಷ್ಟಾಚಾರದ ವಿರುದ್ಧ ಬೃಹತ್ ಆಂದೋಲನವನ್ನು ಆಯೋಜಿಸಿದ್ದರು, ಮತ್ತು ಆಂದೋಲನದಿಂದ ಹುಟ್ಟಿದ ಎಎಪಿ ಇಂದು ಭ್ರಷ್ಟಾಚಾರದಲ್ಲಿ ಮುಳುಗಿದೆ, ಅದಕ್ಕಾಗಿಯೇ ಅವರು ಹಜಾರೆ ಸಹಾಯವನ್ನು ಕೋರಿರುವುದಾಗಿ ಗುಪ್ತಾ ಹೇಳಿದ್ದಾರೆ.

2011ರಲ್ಲಿ ದೆಹಲಿಯ ರಾಮ್‌ಲೀಲಾ ಮೈದಾನದಿಂದ ಅಣ್ಣಾ ಹಜಾರೆ ಪ್ರಾರಂಭಿಸಿದ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಕೇಜ್ರಿವಾಲ್ ಅವರು ಮುಂಚೂಣಿ ನಾಯಕರಾಗಿದ್ದರು. ನಂತರ, ಕೇಜ್ರಿವಾಲ್ ಮತ್ತವರ ಬೆಂಬಲಿಗರು ಸಕ್ರಿಯ ರಾಜಕೀಯಕ್ಕೆ ಹೊರಳಿ ಎಎಪಿ ಪಕ್ಷ ಸ್ಥಾಪಿಸಿದರು. ಇದು ದೆಹಲಿಯಲ್ಲಿ ಮೂರು ಬಾರಿ ಸರ್ಕಾರ ರಚಿಸಿದೆ. ಮತ್ತು ಪಂಜಾಬ್ ವಿಧಾನಸಭೆಯಲ್ಲಿ ಮುಖ್ಯ ವಿರೋಧ ಪಕ್ಷವಾಗಿ ಕೆಲಸ ನಿರ್ವಹಿಸುತ್ತಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group