ಬೆಳಗಾವಿ: ರಾಯಣ್ಣ-ಶಿವಾಜಿ ಬೆಂಬಲಿಗರ ಘರ್ಷಣೆ; ಲಾಠಿ ಪ್ರಹಾರ

ವರದಿಗಾರ (ಆ.28): ಬೆಳಗಾವಿಯ ಪೀರನವಾಡಿಯಲ್ಲಿ ರಾಯಣ್ಣ ಅಭಿಮಾನಿಗಳು ಮತ್ತು ಶಿವಾಜಿ ಬೆಂಬಲಿಗರ ನಡುವೆ ಮತ್ತೆ ಘರ್ಷಣೆ ಉಂಟಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ದಾರೆ.
ಗುರುವಾರ ರಾತ್ರಿ ಪೀರನವಾಡಿಯಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಮರುಸ್ಥಾಪನೆ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ ಶಿವಾಜಿ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಪ್ರಯತ್ನ ನಡೆದಾಗ ಘರ್ಷಣೆ ಉಂಟಾಗಿದೆ.
ಇಂದು ಬೆಳಗ್ಗೆ ಕನ್ನಡ ಸಂಘಟನೆ ಕಾರ್ಯಕರ್ತರು ವಿಜಯೋತ್ಸವ ನಡೆಸಲು ಬೈಕ್ ಮೂಲಕ ಮೆರವಣಿಗೆ ತೆರಳುತ್ತಿದ್ದ ವೇಳೆ ಎಂಇಎಸ್ ಕಾರ್ಯಕರ್ತರು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿಚಾರ್ಜ್ ಮಾಡಿದರು.
ಪೀರನವಾಡಿಯಲ್ಲಿ ಇದೀಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಕಿಡಿಗೇಡಿಗಳು ತೂರಿದ ಕಲ್ಲುಗಳು ಕೆಲ ಪೊಲೀಸ್ ಸಿಬ್ಬಂದಿಗೂ ತಗುಲಿದೆ. ಕೆಲವರು ಗಾಯಗೊಂಡಿದ್ದಾರೆ. ಮೊದಲು ಬೈಕ್ ರಾಲಿ ನಡೆಸಲು ಮುಂದಾದ ಕನ್ನಡ ಸಂಘಟನೆ ಕಾರ್ಯಕರ್ತರ ಮೇಲೂ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡಬೇಕು, ಅದನ್ನು ವೃತ್ತವಾಗಿ ಪರಿವರ್ತಿಸಬೇಕು ಎಂಬುದು ರಾಯಣ್ಣ ಬೆಂಬಲಿಗರ ಒತ್ತಾಯವಾದರೆ, ಛತ್ರಪತಿ ಶಿವಾಜಿ ಪ್ರತಿಮೆ ಈ ವೃತ್ತದಲ್ಲಿ ಸ್ಥಾಪಿಸಬೇಕು ಎಂಬುದು ಮರಾಠಿ ಭಾಷಿಕರ ಒತ್ತಾಯವಾಗಿದೆ. ಹಿಂದಿನಿಂದಲೂ ಈ ಸಂಘರ್ಷ ಬೂದಿಮುಚ್ಚಿದ ಕೆಂಡದಂತೆ ಇತ್ತು. ಇದೀಗ ಸ್ಫೋಟಗೊಂಡಿದೆ.
