ವಿದ್ಯಾರ್ಥಿ ವೇತನದ ಅರ್ಜಿ ತುಂಬಲು ಪಟ್ಟಣಕ್ಕೆ ಹೋಗಿದ್ದ ದಲಿತ ಬಾಲಕಿಯ ಅತ್ಯಾಚಾರವೆಸಗಿ ಭೀಕರ ಹತ್ಯೆ

ವರದಿಗಾರ (ಆ.27): ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ತುಂಬಲು ಮನೆಯಿಂದ ಪಟ್ಣಣಕ್ಕೆ ಹೋಗಿದ್ದ 17 ವರ್ಷದ ದಲಿತ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಗ್ರಾಮದ ಹೊರವಲಯದಲ್ಲಿ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಲಖಿಮ್ಪುರ ಖೇರಿಯಲ್ಲಿ ನಡೆದಿದೆ. ಇದೇ ಜಿಲ್ಲೆಯಲ್ಲಿ 10 ದಿನಗಳ ಅವಧಿಯಲ್ಲಿ ನಡೆಯುತ್ತಿರುವ ಎರಡನೇ ಪ್ರಕರಣ ಇದಾಗಿದೆ. 13 ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿ ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದೆ.
ನೀಮ್ಗಾಂನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಗ್ರಾಮದಿಂದ 200 ಮೀಟರ್ ದೂರದಲ್ಲಿರುವ ಕೆರೆಯೊಂದರ ಬಳಿ ಕ್ರೂರವಾಗಿ ಹತ್ಯೆ ಮಾಡಿದ ರೀತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.
ಆಕೆಯ ಕುತ್ತಿಗೆಯಲ್ಲಿ ಆಳವಾದ ಗಾಯದ ಗುರುತುಗಳಿದ್ದು, ಆಕೆಯ ಕಾಲಿನ ಒಂದು ಭಾಗವನ್ನು ಪ್ರಾಣಿಗಳು ತಿಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವುದು ದೃಢಪಟ್ಟಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಆಕೆ 12ನೇ ತರಗತಿಯಲ್ಲಿ ಕಲಿಯುತ್ತಿದ್ದಳು. ವಿದ್ಯಾರ್ಥಿವೇತನದ ಅರ್ಜಿ ಭರ್ತಿ ಮಾಡಲು ಸೋಮವಾರ ಪಕ್ಕದ ಪಟ್ಟಣಕ್ಕೆ ಹೋಗಿದ್ದಳು. ಎಷ್ಟು ಹೊತ್ತಾದರೂ ಆಕೆ ಮನೆಗೆ ವಾಪಾಸಾಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದೆವು ಎಂದು ಆಕೆಯ ಪೋಷಕರು ತಿಳಿಸಿದ್ದಾರೆ.
