ಡಿ.ಜೆ ಹಳ್ಳಿ ಗಲಭೆಗೆ ಡ್ರಗ್ಸ್ ಮಾಫಿಯಾ ಗ್ಯಾಂಗ್ಗಳ ನಡುವಿನ ಘರ್ಷಣೆ ಕಾರಣ: ಸಿ.ಎಂ.ಇಬ್ರಾಹೀಂ

ವರದಿಗಾರ (ಆ.27): ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಗೆ ಡ್ರಗ್ ಮಾಫಿಯಾ ನಂಟು ಇರುವುದು ಬೆಳಕಿಗೆ ಬಂದಿದೆ. ಇಂದು ಸಿಸಿಬಿ ಪೊಲೀಸರು ಒಂದು ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದು, ಇದು ಕೂಡ ಈ ಗಲಭೆಯೊಂದಿಗೆ ಸಂಬಂಧ ಹೊಂದಿದೆ ಎಂದು ಸ್ವತಃ ನಗರ ಪೊಲೀಸ್ ಆಯುಕ್ತರೇ ಹೇಳಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹೀಂ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಜೆ ಹಳ್ಳಿ ಪ್ರಕರಣವನ್ನು ಬಿಜೆಪಿಯವರು ಒಂದು ಜಾತಿಗೆ ತಳಕು ಹಾಕಲೆತ್ನಿಸಿದರು. ಆದರೆ ಆ ಘಟನೆ ನಡೆದಿರುವುದು ಡ್ರಗ್ ಮಾಫಿಯಾದಿಂದ ಎನ್ನುವುದು ಈಗ ಗೊತ್ತಾಗಿದೆ. 326 ಜನರನ್ನು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಿಡಿದಿದ್ದಾರೆ. ಡಿ.ಜೆಹಳ್ಳಿ ಗಾಂಜಾ, ಅಫೀಮು ತಾಣ. ನಗರದಲ್ಲಿ ಇಂದು ಕೋಟಿ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಡಿ.ಜೆ ಹಳ್ಳಿ ಗಲಭೆಗೆ ಡ್ರಗ್ಸ್ ಮಾಫಿಯಾ ನಡುವಿನ ಘರ್ಷಣೆ ಕಾರಣ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ಪಾದರಾಯನಪುರದಲ್ಲಿಯೂ ಇಂತಹ ಗಾಂಜಾ ವ್ಯಸನಿಗಳಿದ್ದಾರೆ. ಈಗಲೇ ಪೊಲೀಸರು ಎಚ್ಚೆತ್ತುಕೊಳ್ಳಬೇಕು. ಪೊಲೀಸರು ಮನಸ್ಸು ಮಾಡಿದರೆ ಪ್ರಕರಣ ಮೂರು ದಿನಕ್ಕೆ ಮುಗಿಸಬಹುದು ಎಂದು ಇಬ್ರಾಹೀಂ ಹೇಳಿದರು.
ಹೃದಯ ವೈಶಾಲ್ಯವುಳ್ಳವರಿಗೆ ಟಿಪ್ಪು ಉತ್ತಮನೂ, ಜಾತಿ ಧರ್ಮದ ವೈರಸ್ ಅಂಟಿದವರಿಗೆ ಟಿಪ್ಪು ವಿರೋಧಿಯಾಗಿಯೂ ಕಾಣುತ್ತಾನೆ. ಮೈಸೂರಿನವರಾದ ಹೆಚ್.ವಿಶ್ವನಾಥ್ ಹೆಚ್ಚು ತಿಳುವಳಿಕೆ ಇರುವ ನಾಯಕ. ಅವರು ಹಲವು ಕೃತಿಗಳನ್ನು ಬರೆದಿದ್ದಾರೆ. ಇತಿಹಾಸವನ್ನು ಚೆನ್ನಾಗಿ ಓದಿಕೊಂಡಿದ್ದಾರೆ. ವಿಶ್ವನಾಥ್ ಯಾವ ಪಕ್ಷದಲ್ಲಿದ್ದಾರೆ ಎನ್ನುವುದೀಗ ಮುಖ್ಯವಲ್ಲ. ಯಡಿಯೂರಪ್ಪನವರೇ ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ. ರಾಷ್ಟ್ರಪತಿಗಳು ಸಹ ಟಿಪ್ಪು ಗುಣಗಾನ ಮಾಡಿದ್ದರು. ಟಿಪ್ಪುವನ್ನು ಕಾಂಗ್ರೆಸ್ನ ವೋಟ್ ಬ್ಯಾಂಕ್ ಎಂದು ಬಿಜೆಪಿಗರು ದೂರುತ್ತಿದ್ದರು. ಶೃಂಗೇರಿ ಶ್ರೀಗಳ ಬಳಿಯೇ ಟಿಪ್ಪು ಬಗ್ಗೆ ಕೇಳಿದರೆ ಹೇಳುತ್ತಾರೆ. ನಂಜನಗೂಡು ದೇಗುಲದ ಬಗ್ಗೆ ಟಿಪ್ಪು ಹೇಗೆ ನಡೆದುಕೊಂಡಿದ್ದ ಎನ್ನುವುದು ಗೊತ್ತಾಗುತ್ತದೆ. ನಂಜನಗೂಡಿನ ಶ್ರೀಕಂಠೇಶ್ವರನಿಗೆ ಇಂದಿಗೂ ಟಿಪ್ಪು ಕೊಟ್ಟ ಪಚ್ಚೆವಜ್ರಕ್ಕೆ ಮಂಗಳಾರತಿ ನಡೆಯುತ್ತದೆ. ಶೃಂಗೇರಿಯಲ್ಲಿ ಸಾವಿರಾರು ಬ್ರಾಹ್ಮಣರ ಊಟಕ್ಕೆ ಟಿಪ್ಪು ಖಜಾನೆಯಿಂದಲೇ ಹಣ ಹೋಗುತ್ತಿತ್ತು. ಮಲಗಿದವರನ್ನು ಎಬ್ಬಿಸಬಹುದು. ಆದರೆ ಸುಮ್ಮನೆ ಕಣ್ಣು ಮುಚ್ಚಿಕುಳಿತವರನ್ನು ಎಬ್ಬಿಸುವುದು ಕಷ್ಟ. ವಿಶ್ವನಾಥ್ ಅವರು ಇರುವ ಸತ್ಯವನ್ನು ಹೊರಗೆ ಹಾಕಿದ್ದಾರೆ. ಯಾವುದೇ ಭಯವಿಲ್ಲದೇ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಹುತಾತ್ಮರಾದವರನ್ನು ಏಕೆ ವಿರೋಧಿಸಬೇಕು. ಯಾವುದೋ ಕಾಯಿಲೆ ಬಂದು ಟಿಪ್ಪು ಸತ್ತಿದ್ದರೆ ಹುತಾತ್ಮರಾಗುತ್ತಿರಲಿಲ್ಲ. ಆದರೆ ಬ್ರಿಟಿಷರ ವಿರುದ್ಧದ ಹೋರಾಟದಿಂದ ಅವರು ವೀರ ಮರಣವನ್ನು ಅಪ್ಪಿದ್ದಾರೆ. ಟಿಪ್ಪು ವಿಚಾರದಲ್ಲಿ ಬಿಜೆಪಿ ಮತ್ತೆ ರಾಜಕೀಯ ಮಾಡುವುದು ಬೇಡ ಎಂದು ಇಬ್ರಾಹೀಂ ಆಗ್ರಹಿಸಿದರು.
