ಪಿಎಂ ಕೇರ್ಸ್ ಫಂಡ್; ಮೊತ್ತ ಬಹಿರಂಗಪಡಿಸುವಂತೆ ಆದೇಶ ನೀಡಲು ಬಾಂಬೆ ಹೈಕೋರ್ಟ್ ನಕಾರ

ವರದಿಗಾರ (ಆ.27): ಕೋವಿಡ್-19 ಸಂಕಷ್ಟದ ನಿವಾರಣೆಗಾಗಿ ಸಂಗ್ರಹಿಸಿದ ಪಿಎಂ-ಕೇರ್ಸ್ ಫಂಡ್ ಮೊತ್ತವನ್ನು ಪ್ರಕಟಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ನ ನಾಗಪುರ ಪೀಠ ತಳ್ಳಿಹಾಕಿದೆ.
ಅರವಿಂದ ವಾಗ್ಮರೆ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ಶುಕ್ರೆ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.
ಪಿಎಂ ಕೇರ್ ನಿಧಿಯಲ್ಲಿ ಸಂಗ್ರಹವಾಗಿರುವ ಮೊತ್ತ ಮತ್ತು ಅದರ ವೆಚ್ಚದ ಕುರಿತು ಸರ್ಕಾರಿ ವೆಬ್ಸೈಟ್ನಲ್ಲಿ ನಿಯಮಿತವಾಗಿ ಪ್ರಕಟಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು. ಜೊತೆಗೆ, ಇದರ ನಿರ್ವಹಣೆ ಮತ್ತು ಪಾರದರ್ಶಕತೆಯನ್ನು ಕಾಪಾಡಲು ವಿಪಕ್ಷದ ಇಬ್ಬರು ಸದಸ್ಯರನ್ನೊಳಗೊಂಡ ಟ್ರಸ್ಟ್ ಸ್ಥಾಪಿಸಲು ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದರು.
ಕೊರೋನಾ ವೈರಸ್ನಿಂದ ಸಂಕಷ್ಟಕ್ಕೊಳಗಾದ ಜನರಿಗೆ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ಪಿಎಂ ಕೇರ್ ನಿಧಿ ಸ್ಥಾಪಿಸಲಾಗಿತ್ತು.
ಕೋವಿಡ್-19 ಸಂಕಷ್ಟದ ಪರಿಸ್ಥಿತಿ ನಿರ್ವಹಣೆಗೆ ಪಿಎಂ ಕೇರ್ಸ್ ಫಂಡ್ ನಡಿ ಸಂಗ್ರಹವಾದ ಹಣವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ-ಎನ್ ಡಿಆರ್ ಎಫ್ ಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿತ್ತು.
ಪಿಎಂ ಕೇರ್ಸ್ ಫಂಡ್ ನಡಿ ಸಂಗ್ರಹವಾದ ಹಣ ಸಂಪೂರ್ಣವಾಗಿ ಚಾರಿಟೇಬಲ್ ಟ್ರಸ್ಟ್ ನ ಹಣ, ಇದಕ್ಕೂ ಎನ್ ಡಿಆರ್ ಎಫ್ ಗೂ ಸಂಬಂಧವಿಲ್ಲ ಎಂದು ಕೋರ್ಟ್ ಹೇಳಿತ್ತು.
