ಕ್ರೈಸ್ಟ್ ಚರ್ಚ್ನ ಮಸೀದಿಗಳಲ್ಲಿ ಗುಂಡಿನ ದಾಳಿ ಪ್ರಕರಣ; 51 ಮಂದಿಯನ್ನು ಹತ್ಯೆ ಮಾಡಿದ್ದ ಭಯೋತ್ಪಾದಕ ಬ್ರೆಂಟನ್ ಟಾರಂಟ್ಗೆ ಪೆರೋಲ್ ರಹಿತ ಜೀವಾವಧಿ ಶಿಕ್ಷೆ

ವರದಿಗಾರ (ಆ.27): ನ್ಯೂಜಿಲೆಂಡ್ನ ಕ್ರೈಸ್ಟ್ ಚರ್ಚ್ನ ಎರಡು ಮಸೀದಿಗಳಲ್ಲಿ ಗುಂಡಿನ ದಾಳಿ ನಡೆಸಿ 51 ಮಂದಿಯ ಹತ್ಯೆಗೆ ಕಾರಣವಾದ ಭಯೋತ್ಪಾದಕ ಬ್ರೆಂಟನ್ ಟಾರಂಟ್ನಿಗೆ ನ್ಯೂಜಿಲೆಂಡ್ ನ್ಯಾಯಾಲಯ ಪೆರೋಲ್ ರಹಿತ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇದು ದೇಶದಲ್ಲಿ ಇದೇ ಮೊದಲ ಬಾರಿಗೆ ನೀಡಿರುವ ಶಿಕ್ಷೆಯಾಗಿದೆ.
ಆಸ್ಟ್ರೇಲಿಯಾ ಮೂಲದ 29 ವರ್ಷದ ಬ್ರೆಂಟನ್ ಟಾರಂಟ್ ವಿರುದ್ಧ 51 ಕೊಲೆ ಆರೋಪಗಳು, 40 ಕೊಲೆ ಯತ್ನಗಳು ಮತ್ತು ಭಯೋತ್ಪಾದಕ ಕೃತ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕಠಿಣ ಶಿಕ್ಷೆ ವಿಧಿಸಿದೆ. ಈತ 2019ರಲ್ಲಿ ಕ್ರೈಸ್ಟ್ಚರ್ಚ್ನ ಎರಡು ಮಸೀದಿಗಳಲ್ಲಿ ಯದ್ವಾತದ್ವ ಗುಂಡಿನ ದಾಳಿ ನಡೆಸಿ ಅಲ್ಲಿ ಪ್ರಾರ್ಥನೆಗೆ ಬಂದಿದ್ದ 51 ಮಂದಿ ಮುಗ್ದ ಜನರನ್ನು ಹತ್ಯೆ ಮಾಡಿದ್ದ. ಮಾತ್ರವಲ್ಲ ಈ ಘಟನೆಯನ್ನು ಆತ ಫೇಸ್ಬುಕ್ನಲ್ಲಿ ಲೈವ್ ಪ್ರಸಾರ ಮಾಡಿದ್ದ. ಆತನ ಕೃತ್ಯಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿತ್ತು.
ಹೈಕೋರ್ಟ್ ನ್ಯಾಯಾಧೀಶ ಕ್ಯಾಮರೂನ್ ಮಾಂಡರ್ ಗುರುವಾರ ಈ ತೀರ್ಪು ಪ್ರಕಟಿಸಿದರು. ಈ ಶಿಕ್ಷೆ ನಿನಗೆ ಸಾಕಾಗುವುದಿಲ್ಲ. ಸಾಯುವವವರೆಗೂ ಬಂಧನದಲ್ಲಿಟ್ಟರೂ ನೀನು ಮಾಡಿದ ಅಪರಾಧಕ್ಕೆ ಆ ಶಿಕ್ಷೆ ನಿನಗೆ ಸಾಕಾಗುವುದಿಲ್ಲ. ನಿನ್ನ ಅಪರಾಧ ಎಷ್ಟು ಕ್ರೂರವಾಗಿದೆ. ನಿನ್ನ ಬಗ್ಗೆ ಯಾವ ಸಂತ್ರಸ್ತರು ಕೂಡ ಸಹಾನುಭೂತಿ ಹೊಂದಿಲ್ಲ ಎಂದು ಶಿಕ್ಷೆ ವಿಧಿಸುವಾಗ ನ್ಯಾಯಾಧೀಶರು ಹೇಳಿದರು.
ಮುಸ್ಲಿಮರಲ್ಲಿ ಭಯ ಉಂಟು ಮಾಡಲು ಈ ಕೃತ್ಯವೆಸಗಿರುವುದಾಗಿ ಈ ಹಿಂದೆ ವಿಚಾರಣೆಯ ವೇಳೆ ಟಾರಂಟ್ ಹೇಳಿಕೆ ನೀಡಿದ್ದ. ಮಾತ್ರವಲ್ಲ ವ್ಯವಸ್ಥಿತವಾಗಿ ಕೃತ್ಯವನ್ನು ಆಯೋಜಿಸಿದ್ದ. ಅತಿ ಹೆಚ್ಚಿನ ಜನರನ್ನು ಕೊಲ್ಲಬೇಕೆಂದು ಬಯಸಿದ್ದೆ ಎಂದು ವಿಚಾರಣೆಯಲ್ಲಿ ಟಾರಂಟ್ ಪೊಲೀಸರೊಂದಿಗೆ ಹೇಳಿದ್ದ.
