ಅಭಿಪ್ರಾಯ

ಸ್ವಂತಿಕೆಯನ್ನು ಹರಾಜಿಗಿಡದೆ ನೈತಿಕತೆಯಿಂದ ಅನ್ಯಾಯವನ್ನು ಪ್ರಶ್ನಿಸುವವರಾಗೋಣ; ಅಲ್ಮೈಡಾ ಗ್ಲಾಡ್ಸನ್

“ದೇಶ ಕಳೆದ ಕೆಲ ವರ್ಷಗಳಿಂದ ಕಳೆದುಕೊಂಡಿರುವುದು ವಿವೇಚನೆ ಮಾತ್ರವಲ್ಲ ಲಜ್ಜೆ ಹಾಗೂ ಸ್ವಾಸ್ಥ್ಯವನ್ನೂ..”

ಲೇಖನ: ಅಲ್ಮೈಡಾ ಗ್ಲಾಡ್ಸನ್ (ಫೇಸ್ಬುಕ್ ವಾಲ್ ನಿಂದ)

ವರದಿಗಾರ (ಆ.26): ಪುಲ್ವಾಮದಲ್ಲಿ ನಲವತ್ತು ಮಂದಿ ಯೋಧರ ನೆತ್ತರು ಹರಿದರೂ, ನಮ್ಮ ಪ್ರಧಾನಿ ಯಾವುದೋ ಖಾಸಗಿ ಚಾನಲೊಂದರ ಶೂಟಿಂಗ್ ಬಿಟ್ಟು ಬರಲಿಲ್ಲ. ಆದರೂ ಈ ದೇಶದ ಬಹುತೇಕ ಜನರಿಗೆ ಇದು ವಿಷಯ ಆಗಲೇ ಇಲ್ಲ

ದೇಶದಲ್ಲಿ ನಿರುದ್ಯೋಗದ ಪ್ರಮಾಣ ನಲವತ್ತೈದು ವರುಷಗಳಲ್ಲೇ ಗರಿಷ್ಟ ಮಟ್ಟಕ್ಕೆ ತಲುಪಿದ ಸಮಯದಲ್ಲಿ, ನಮ್ಮ ಪ್ರಧಾನಿ ಪವಿತ್ರ ಕೇದಾರನಾಥ ಕ್ಷೇತ್ರದಲ್ಲಿ ಬಣ್ಣ-ಬಣ್ಣದುಡುಗೆಗಳನ್ನು ತೊಟ್ಟು, ಕಾರ್ಪೇಟ್ ಹಾಸಿ ಶೂಟಿಂಗ್ ಮಾಡುತ್ತಿದ್ದರು. ಆದರೂ ಯಾರಿಗೂ ಇದು ಧರ್ಮದ ಅವಹೇಳನ, ಖಾಸಗಿ ಸ್ಟಂಟ್ ಎಂದೆನಿಸಲಿಲ್ಲ.

ಡಿಮಾನೆಟೈಜೇಷನ್‍ನಿಂದ ನಿಗದಿಯಾಗಿದ್ದ ಮದುಗೆ, ಸಮಾರಂಭಗಳನ್ನು ನಡೆಸಲು ಜನರು ಪರದಾಡುತ್ತಿದ್ದಾಗ, ಇದೇ ಪ್ರಧಾನಿ ‘ಜನರಿಗೆ ಮದುವೆಯಾಗಬೇಕು ಆದರೆ ಪೈಸಾ ನಹೀಂ ಹೇ’ ಎಂದು ಅಸಹ್ಯವಾಗಿ ಚಪ್ಪಾಳೆ ತಟ್ಟುತ್ತಾ, ಗಹಗಹಿಸಿ ನಗುತ್ತಿದ್ದರು. ಆದರೂ ಜನರಿಗೆ ಇಂಥ ಅಸಹ್ಯವನ್ನು ಸಹಿಸಿಕೊಳ್ಳಬಾರದೆಂದು ಅನಿಸಲೇ ಇಲ್ಲ.

ಯೋಗದ ಹೆಸರಿನಲ್ಲಿ ಇಪ್ಪತ್ತು ಮೂವತ್ತು ಕ್ಯಾಮರಗಳನ್ನಿಟ್ಟು, ತನ್ನ ಖಾಸಗಿ ಸಮಯದ ಶೂಟಿಂಗ್ ಮಾಡಿ, ಬಂಡೆಕಲ್ಲಿನ ಮೇಲೆ ಕರೆಂಟ್ ಹೊಡೆದು ಬಿದ್ದ ಕಾಗೆ ಥರ ಬಿದ್ದಾಗಲೂ, ಈ ದೇಶದ ಜನ ಬಾಯಿ ತೆರೆಯಲಿಲ್ಲ

ಕೋವಿಡ್ ಪ್ರಕರಣಗಳು ಮೂವತ್ತು ಲಕ್ಷ ದಾಟಿರುವಾಗ, ಒಂದೇ ತಿಂಗಳಿನಲ್ಲಿ ದೇಶದಲ್ಲಿ ಐವತ್ತು ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿರುವಾಗ, ದೇಶದೆಲ್ಲೆಡೆ ಕೋವಿಡ್-ಲಾಕ್‍ಡೌನ್ ಕಾರಣದಿಂದ ಸುಮಾರು ಮೂರುವರೆ ಲಕ್ಷ ಕಿರಾಣಿ ಅಂಗಡಿಗಳು ಹಾಗೂ ಸಣ್ಣ ವ್ಯಾಪಾರಗಳು ಮುಚ್ಚಿ ಹೋಗಿರುವಾಗ, ಇದೇ ಪ್ರಧಾನಿ ನವಿಲಿನ ಜೊತೆ ಫೊಟೋ ತೆಗೆಸಿಕೊಂಡು ತಮ್ಮ ಎಂದಿನ ಪಿಆರ್ ಸ್ಟಂಟ್ ಮಾಡುತ್ತಿದ್ದಾರೆ. ಆದರೆ ಜನರಿಗೆ ಇದೊಂದು ದೇಶದ ಸಾಧನೆ.

ದಿನಕ್ಕೆ ನಾಲ್ಕೈದು ಕುರ್ತಾ ಬದಾಲಾಯಿಸಿ, ಹೋದಲೆಲ್ಲಾ ಚಿತ್ರ-ವಿಚಿತ್ರ ವೇಷ-ಭೂಷಣ ಧರಿಸಿ, ಡೊಳ್ಳು, ನಗಾರಿ, ಡೋಲು, ಕೊಳಲು ಬಾರಿಸುತ್ತಾ, ತಾನೊಬ್ಬ ಪ್ರಧಾನಿಯೆಂದು ಮರೆತು, ವಿವಿಧ ದೇಶದಗಳ ನಾಯಕರ ಜೊತೆ ಅಪ್ಪಿಕೋ ಚಳುವಳಿ ಮಾಡಿದರೂ, ನನ್ನ ದೇಶದ ಬಹುತೇಕ ಜನರಿಗೆ ಇದರಲ್ಲಿ ಏನೂ ತಪ್ಪು ಕಂಡು ಬಂದಿಲ್ಲ.

ಇದೆಲ್ಲಾ ಬಿಡಿ, ಇದರಲ್ಲಿ ಯಾವುದಾರೊಂದನ್ನಾದರೂ ಈ ದೇಶದ ಬೇರೆ ಯಾವುದೇ ಪಕ್ಷದ, ಬೇರೆ ಯಾವುದೇ ಧುರೀಣರು ಮಾಡಿರುತ್ತಿದ್ದರೂ, ಈ ದೇಶದಲ್ಲಿ ಏನಾಗುತ್ತಿತ್ತೆಂದು ಊಹಿಸಲೂ ಅಸಾಧ್ಯ. ನೆಹರೂರವರನ್ನು ಅವರ ತಂಗಿಯ ಮಗಳು, ರಾಹುಲ್ ಗಾಂಧಿಯನ್ನು ಆತನ ತಂಗಿಯ ಮಗಳು, ಸೋನೀಯಾ ಗಾಂಧಿಯವರನ್ನು ಮನಮೋಹನ್ ಸಿಂಗ್, ಇನ್ಯಾವುದೋ ಗಂಡಸಿನ ಜೊತೆ ಕಟ್ಟಿಕೊಟ್ಟು, ಅವರ ಅಸಹ್ಯ, ಅರೆನಗ್ನ ಫೊಟೋಶಾಪ್‍ಗಳನ್ನು ಮಾಡಿ ವಿಕೃತಿ ಮೆರೆದ ದೇಶ ನನ್ನದು. ಇಂಥ ವಿಕೃತರ ನಾಡಿನಲ್ಲಿ ದೇಶದ ಪ್ರಧಾನಿಯೊಬ್ಬರು ಕಳೆದ ಆರು ವರುಷಗಳಿಂದ, ಅವರ ಹುದ್ದೆಯ ಘನತೆಯನ್ನೇ ಮರೆತು, ಸಾರ್ವಜನಿಕವಾಗಿ ನಡೆದುಕೊಳ್ಳುತ್ತಿರುವ ರೀತಿ, ಅವರ ಪಿರ್ ಸ್ಟಂಟ್‍ಗಳು ಚರ್ಚೆಯ ವಿಷಯವಾಗುವುದೇ ಇಲ್ಲ. ಈ ದೇಶ ಕಳೆದ ಕೆಲ ವರುಷಗಳಿಂದ ಕಳೆದುಕೊಂಡಿರುವುದು ವಿವೇಚನೆ ಮಾತ್ರವಲ್ಲ ಬದಲಾಗಿ ಲಜ್ಜೆ ಹಾಗೂ ಸ್ವಾಸ್ಥ್ಯವನ್ನು ಕೂಡಾ. ಕೃತಿ ರಚಿಸಲಾಗದವರು ವಿಕೃತಿಯನ್ನೇ ಮೆರೆದರೂ ಈ ದೇಶ ಮೌನಕ್ಕೆ ಜಾರಿದೆಯೆಂದರೆ, ನಮ್ಮ ನೆಲಕ್ಕೆ ರಕ್ತದ ಹಾಗೂ ವಾತಾವರಣಕ್ಕೆ ವಿಷದ ರುಚಿ ಹತ್ತಿದೆಯೆಂದರ್ಥ.

ಆದರೂ ನನಗಂತೂ ಒಂದು ವ್ಯಯಕ್ತಿಕ ಸಮಾಧಾನ ಇದೆ. ಮುಂದೊಂದು ದಿನ ನನ್ನ ಮಕ್ಕಳು ಇಂಥ ವಿಕೃತ ಸಮಯದಲ್ಲಿ ನೀನೇನು ಮಾಡುತ್ತಿದ್ದೆ ಎಂದು ಕೇಳುವಾಗ, ಎರಡು ರೂಪಾಯಿಗೆ ನನ್ನನ್ನು ಹರಾಜಿಗಿಡದೆ, ವಿಕೃತರ ಮಾಫೀಯಾ ಸೇರದೇ, ಅವರನ್ನೂ, ಅವರ ವಿಕೃತಿಯನ್ನು ಎಗ್ಗಿಲ್ಲದೆ, ಸತತವಾಗಿ ಪ್ರಶ್ನಿಸುತ್ತಿದ್ದೆ ಎಂದು ಎದೆತಟ್ಟಿ ಹೇಳಬಲ್ಲೆ. ನನ್ನ ಪೀಳಿಗೆಯ, ನನ್ನ ಓರಗೆಯ, ನನ್ನ ಪರಿಚಯದ ಬಹುತೇಕರು ಇಂಥದೊಂದು ಉತ್ತರ ಕೊಡಲಾರರು ಎನ್ನುವುದೇ ಈ ಅಚ್ಚೆ ದಿನ್‍ಗಳಲ್ಲಿ ನನ್ನ ಸಾಧನೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group