ಕಾಂಗ್ರೆಸ್ ಮುನ್ನಡೆಸಲು ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ: ಶಿವಸೇನೆ

ಗಾಂಧಿ ಕುಟುಂಬ “ಕಾಂಗ್ರೆಸ್ಸಿನ ಆಧಾರ್ ಕಾರ್ಡ್” ಎಂದು ಬಣ್ಣಿಸಿರುವ ಶಿವಸೇನೆ
ವರದಿಗಾರ (ಆ.26): ಗಾಂಧಿ ಕುಟುಂಬ “ಕಾಂಗ್ರೆಸ್ಸಿನ ಆಧಾರ್ ಕಾರ್ಡ್” ಎಂದು ಬಣ್ಣಿಸಿರುವ ಶಿವಸೇನೆ ಸಂಸದ ಸಂಜಯ್ ರಾವತ್, ಪಕ್ಷವನ್ನು ಮುನ್ನಡೆಸಲು ಗಾಂಧಿ ಕುಟುಂಬದ ಹೊರಗೆ ಯಾರೂ ಇಲ್ಲ. ರಾಹುಲ್ ಗಾಂಧಿ ಅವರೇ ಪಕ್ಷ ಮುನ್ನೆಸುವುದು ಸೂಕ್ತ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ -ಸಿಡಬ್ಲ್ಯುಸಿ ಸಭೆ ನಡೆದ ಒಂದು ದಿನದ ಬಳಿಕ ರಾವತ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗಾಂಧಿ ಪರಿವಾರ ಕಾಂಗ್ರೆಸ್ಸಿನ ಆಧಾರ್ ಕಾರ್ಡ್ ಇದ್ದಂತೆ. ಅದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿಯೇ ಆಗಿರಲಿ. ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಗಾಂಧಿಯೇತರರ ಬೇಡಿಕೆ ಸೂಕ್ತವಲ್ಲ. ಪಕ್ಷವನ್ನು ಮುನ್ನಡೆಸಬಲ್ಲ ನಾಯಕ, ಗಾಂಧಿ ಕುಟುಂಬದ ಹೊರಗೆ ನನಗೆ ಯಾರೂ ಕಾಣುತ್ತಿಲ್ಲ ಎಂದು ರಾವತ್ ಮಂಗಳವಾರ ಹೇಳಿದ್ದಾರೆ.
ಕಾಂಗ್ರೆಸ್ ದೇಶದ ಪ್ರಮುಖ ವಿರೋಧ ಪಕ್ಷವಾಗಿದೆ. ಅದು ತನ್ನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಕೊನೆಗೊಳಿಸಬೇಕು ಮತ್ತು ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಬೇಕು ಎಂದು ರಾವತ್ ಸಲಹೆ ನೀಡಿದ್ದಾರೆ.
“ರಾಹುಲ್ ಗಾಂಧಿ ಈ ಹಿಂದೆ ಪಕ್ಷವನ್ನು ಚೆನ್ನಾಗಿ ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಡ ವಿಧಾನಸಭಾ ಚುನಾವಣೆ ಎದುರಿಸಲಾಗಿತ್ತು. ಈ ರಾಜ್ಯಗಳಲ್ಲಿ ಕಾಂಗ್ರೆಸ್ ಜಯಗಳಿಸಿತು. ಲೋಕಸಭಾ ಚುನಾವಣೆಯಲ್ಲಿ ಸೋಲಿನ ನಂತರ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತ್ಯಜಿಸಿದ್ದಾರೆ. ಆದರೆ ಇಂದಿಗೂ ರಾಹುಲ್ ಗಾಂಧಿ ಕಾಂಗ್ರೆಸ್ ಅನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ರಾವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
