ದೇವರು ಮತ್ತು ದೇವತೆಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯ ಆರೋಪ: ಮಹಿಳಾ ಯೂಟ್ಯೂಬರ್ ಬಂಧನ

ವರದಿಗಾರ (ಆ.26): ಹಿಂದೂ ದೇವರು ಮತ್ತು ದೇವತೆಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಲ್ಲಿ ಪ್ರಯಾಗ್ ರಾಜ್ ಪೊಲೀಸರು ಮಂಗಳವಾರ ಮಹಿಳಾ ಯೂಟ್ಯೂಬರ್ ಒಬ್ಬರನ್ನು ಬಂಧಿಸಿದ್ದಾರೆ.
ಪ್ರಯಾಗ್ರಾಜ್ನ ಖುಲ್ಬಾದ್ ನಿವಾಸಿಯಾದ ಬರಹಗಾರ್ತಿ ಹೀರ್ ಖಾನ್ ಬಂಧಿತೆ. ಹಿಂದೂ ದೇವರು ಮತ್ತು ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆನ್ನಲಾದ ವಿವಾದಾತ್ಮಕ ವೀಡಿಯೊ ವೈರಲ್ ಆದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಹೀರ್ ಖಾನ್ ವೀಡಿಯೊಗಳು ಆನ್ಲೈನ್ನಲ್ಲಿ ವೈರಲ್ ಆಗುತ್ತಿದ್ದಂತೆ ಟ್ವಿಟ್ಟರ್ ಬಳಕೆದಾರರು ಹಿಂದೂ ದೇವರನ್ನು ಅವಮಾನಿಸಿದ್ದಕ್ಕಾಗಿ #ArrestHeerKhan ಹ್ಯಾಷ್ಟ್ಯಾಗ್ ಬಳಸಿ ಟ್ರೆಂಡ್ ಮಾಡಿದ್ದರು.
“ಹೀರಾ ಖಾನ್” ನಂತಹ ಜನರು ನಮ್ಮ ದೇವರನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದಾರೆ. ನಾವು ಸಹಿಸಿ ಸುಮ್ಮನಿರುವುದರಿಂದ ಅವರು ಪ್ರಜಾಪ್ರಭುತ್ವದ ಹಕ್ಕುಗಳನ್ನು ದುರುಪಯೋಗಪಡಿಸಿ ಕೊಳ್ಳುತ್ತಿದ್ದಾರೆ, ಆದ್ದರಿಂದ ಅಂತಹ ಹಿಂದೂಫೋಬಿಕ್ ಜನರನ್ನು ನಾವು ಇನ್ನು ಮುಂದೆ ಸಹಿಸುವುದಿಲ್ಲ. ತಕ್ಷಣವೇ ಅವರನ್ನು ಬಂಧಿಸಿ ಎಂದು ಬಿಸರಿಯಾ ಮಯಾಂಕ್ ಎಂಬವರು ಟ್ವೀಟ್ ಮಾಡಿದ್ದರು.
