ರೇಪಿಸ್ಟ್ ಗುರ್ಮೀತ್ ಸಿಂಗ್ನ ಬಿಡುಗಡೆಗೆ ಹಿಂದೂ ಮಹಾಸಭಾದಿಂದ ಒತ್ತಾಯ: ಗೃಹ ಮಂತ್ರಿ ಅಮಿತ್ ಶಾಗೆ ಪತ್ರ

ವರದಿಗಾರ (ಆ.26): ಅತ್ಯಾಚಾರ, ಕೊಲೆ ಪ್ರಕರಣ ಮತ್ತಿತರ ಗಂಭೀರ ಅಪರಾಧ ಪ್ರಕರಣಗಳಲ್ಲಿ ಜೈಲು ಪಾಲಾಗಿರುವ ರಾಮ್ ರಹೀಂ ಅಲಿಯಾಸ್ ಗುರ್ಮೀತ್ ಸಿಂಗ್ನನ್ನು ಬಿಡುಗಡೆ ಮಾಡುವಂತೆ ಅಖಿಲ ಭಾರತೀಯ ಹಿಂದೂ ಮಹಾಸಭಾ ಒತ್ತಾಯಿಸಿದೆ.
ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿರುವ ಮಹಾಸಭಾ, ಹಿಂದೂ ಸಂತರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ. ಅವರ ವಿರುದ್ಧ ಟಿವಿ ಧಾರಾವಾಹಿಗಳಲ್ಲಿ ಅವಮಾನಕರ ರೀತಿಯಲ್ಲಿ ಚಿತ್ರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಡೇರಾ ಸಚ್ಚಾ ಸೌದ ಸಂಸ್ಥೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ನನ್ನು ತಪ್ಪಿತಸ್ಥ ಎಂದು ಪಂಚಕುಲಾದ ಸಿಬಿಐ ನ್ಯಾಯಾಲಯ ಈಗಾಗಲೇ ತೀರ್ಪು ನೀಡಿ, ಜೈಲಿಗೆ ಕಳುಹಿಸಿದೆ.
ರಹೀಮ್ ತನ್ನ ಆಶ್ರಮದಲ್ಲಿ ಮಹಿಳಾ ಭಕ್ತರ ಮೇಲೆ ಅತ್ಯಾಚಾರವೆಸಗಿ ಮತ್ತು ಪತ್ರಕರ್ತ ಛತ್ರಪತಿ ಕೊಲೆ, ಹಿಂಸಾಚಾರ ಮತ್ತಿತರ ಆರೋಪ ಎದುರಿಸುತ್ತಿದ್ದಾನೆ. ಇಂತಹ ಅತ್ಯಾಚಾರಿಯನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
